ಬೆಂಗಳೂರು: 1975ರಿಂದ 1977ರ ನಡುವೆ ಕಾಂಗ್ರೆಸ್ ಪಕ್ಷವು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಚರ್ಚೆಯನ್ನೇ ನಡೆಸದೆ ಒತ್ತಾಯದಿಂದ ಶಸ್ತ್ರಚಿಕಿತ್ಸೆ ಮಾಡಿಸಿ ಜನಸಂಖ್ಯಾ ನಿಯಂತ್ರಣ ಮಾಡಿತ್ತು. ಇಂದಿರಾ ಬ್ರಿಗೇಡ್, ಸಂಜಯ್ ಬ್ರಿಗೇಡ್ ಹೆಸರಿನಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಜನಸಂಖ್ಯಾ ನಿಯಂತ್ರಣ ಮಾಡಿತ್ತು. ಯುವ ಕಾಂಗ್ರೆಸ್ಗೆಿ ಈ ಸಂಬಂಧ ನಿಗದಿತ ಗುರಿಯನ್ನೂ ನೀಡಲಾಗಿತ್ತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿ.ಟಿ.ರವಿ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದÀರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ದೇಶದ ಜನಸಂಖ್ಯೆ ಸುಮಾರು 34 ಕೋಟಿ ಆಸುಪಾಸಿನಲ್ಲಿತ್ತು. ರಾಜ್ಯದ ಜನಸಂಖ್ಯೆ 1.75 ಕೋಟಿಯಷ್ಟಿತ್ತು. ಈಗ ದೇಶದ ಜನಸಂಖ್ಯೆ 140 ಕೋಟಿಯಷ್ಟಾಗಿದೆ. ರಾಜ್ಯದ ಜನಸಂಖ್ಯೆಯೂ ಏಳು ಕೋಟಿ ದಾಟಿದೆ. ಅದರೆ ಪ್ರಾಕೃತಿಕ ಸಂಪನ್ಮೂಲ ಜಾಸ್ತಿ ಆಗಿಲ್ಲ. ಕಣ್ಣೆದುರೇ ನದಿಗಳು, ಗುಡ್ಡಗಳು ಮಾಯವಾಗುತ್ತಿದೆ. ಹಿಂದೆ ಪ್ಲೇಗ್, ಕಾಲರಾದಂಥ ರೋಗಗಳು ಬರುತ್ತಿದ್ದವು. ಆದ್ದರಿಂದ “ಮಕ್ಕಳಿರಲವ್ವ ಮನೆತುಂಬ” ಎಂಬ ಘೋಷಣೆ ಇತ್ತು. ಆಗ ಸಾವಿನ ಸಂಖ್ಯೆ ಒಂದು ಸಾವಿರಕ್ಕೆ 28 ಜನರಷ್ಟಿದ್ದುದು ಈಗ 7ಕ್ಕೆ ಇಳಿದಿದೆ. ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಜನಸಂಖ್ಯೆ ನಿಯಂತ್ರಣದ ಚರ್ಚೆ ಹುಟ್ಟು ಹಾಕಲಾಗಿದೆ ಎಂದು ತಿಳಿಸಿದರು.
ಜನಸಂಖ್ಯಾ ನಿಯಂತ್ರಣದ ಚರ್ಚೆಯನ್ನು ಟ್ವೀಟ್ ಮೂಲಕ ಮುಂದಿಟ್ಟಿದ್ದೇನೆ. ಅಸ್ಸಾಂ, ಉತ್ತರ ಪ್ರದೇಶದ ಮುಖ್ಯಮಂತ್ರಿಗಳೂ ಈ ಕುರಿತು ಮಾತನಾಡಿದ್ದಾರೆ. ನಾನೇನೂ ಈ ಚರ್ಚೆ ಆರಂಭದಲ್ಲಿ ಮೊದಲಿಗನಲ್ಲ ಎಂದರು. ಕೆಲವು ಪಕ್ಷಗಳಿಗೆ ದೇಶದ ಹಿತಾಸಕ್ತಿಗಿಂತ ಸ್ವಹಿತವೇ ಮುಖ್ಯ. ನನಗೆ ಮತ್ತು ನಮ್ಮ ಪಕ್ಷಕ್ಕೆ ದೇಶದ ಹಿತವೇ ಮುಖ್ಯ ಎಂದು ಅವರು ನುಡಿದರು. ಹೆಚ್ಚು ಮಕ್ಕಳಿರುವವರನ್ನು ರಾಜ್ಯ ಬಿಟ್ಟು ಕಳಿಸಿ ಎನ್ನಲಾಗುತ್ತದೆಯೇ ಎಂದೂ ಅವರು ಪ್ರಶ್ನಿಸಿದರು.
370ನೇ ವಿಧಿ ಬಗ್ಗೆ 70 ವರ್ಷಗಳಿಂದ ಚರ್ಚೆ ನಡೆದಿದೆ. ರಾಮಮಂದಿರಕ್ಕೆ ಸಂಬಂಧಿಸಿ ನೂರಾರು ವರ್ಷ ಹೋರಾಟ ನಡೆದಿದೆ. ದೇಶದ ಹಿತದ ವಿಚಾರದಲ್ಲಿ ನಾವು ಯಾವತ್ತೂ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದರು.
ಹೇಳಿದ ತಕ್ಷಣ ಜನಸಂಖ್ಯಾ ನಿಯಂತ್ರಣ ಜಾರಿಯಾಗುವುದಿಲ್ಲ. ಮದುವೆ ಬೇಡ, ಮಕ್ಕಳು ಬೇಡ ಎನ್ನುವವರೂ ಇದ್ದಾರೆ. ಅವರು ಸಂತಸ ಪಡಬಹುದು. ಸಹಮತ ಇದ್ದರೆ ನಿರ್ಣಯಕ್ಕೆ ಬೆಂಬಲ ಸಿಗುತ್ತದೆ. ಚರ್ಚೆ, ಶಾಸಕಾಂಗದಲ್ಲಿ ಮಂಡನೆ, ಸಚಿವ ಸಂಪುಟದಲ್ಲಿ ಚರ್ಚೆ ಆದ ಬಳಿಕವಷ್ಟೇ ಇದು ಕಾಯಿದೆ ಆಗಲು ಸಾಧ್ಯ ಎಂದರು. ಈ ಕುರಿತು ಶಾಸಕರು, ಮುಖ್ಯಮಂತ್ರಿಗಳು, ಪಕ್ಷದ ಪ್ರಮುಖರ ಜೊತೆ ಚರ್ಚಿಸುತ್ತೇನೆ ಎಂದು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು.
ಜಾತಿ ಜನಗಣತಿಯನ್ನು ಬಹಿರಂಗ ಪಡಿಸುವಂತೆ ಕಾಂಗ್ರೆಸ್ಸಿಗರು ಚರ್ಚೆಯನ್ನು ಹುಟ್ಟು ಹಾಕುತ್ತಿದ್ದಾರೆ. 2015ಕ್ಕೆ ಈ ಕುರಿತ ವರದಿ ಲಭಿಸಿದೆ. 2015ರಿಂದ 2019ರವರೆಗೆ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಬೆಂಬಲದ ಸರಕಾರವೇ ಆಡಳಿತದಲ್ಲಿತ್ತು. ಆದರೂ ಯಾಕೆ ಅದನ್ನು ಪ್ರಕಟಿಸಿಲ್ಲ ಎಂದು ಅವರು ಪ್ರಶ್ನಿಸಿದರು. ಜಾತಿ ಗಣತಿ ಸಮರ್ಪಕವಾಗಿಲ್ಲ ಎಂದು ಅವರೇ ನೇಮಿಸಿದ ಸದಸ್ಯರು ಈ ವರದಿಗೆ ಸಹಿ ಹಾಕಿಲ್ಲ. ಪಕ್ಷ, ಸಚಿವ ಸಂಪುಟದಲ್ಲಿ ಸಹಮತ ಇಲ್ಲದ ಕಾರಣಕ್ಕೆ ನಾಲ್ಕು ವರ್ಷ ಅದನ್ನು ಹಾಗೇ ಇಡಲಾಗಿದೆ. ಕಾಂತರಾಜು ಅಧ್ಯಕ್ಷತೆಯ ಸಮಿತಿಯೂ ಇದಕ್ಕೆ ಸಹಮತ ವ್ಯಕ್ತಪಡಿಸಿ ಸಹಿ ಮಾಡಿಲ್ಲ. ಅದು ವೈಜ್ಞಾನಿಕವಾಗಿಲ್ಲ ಎಂದು ಆಗಿನ ಆಡಳಿತ ಪಕ್ಷದವರೇ ಹೇಳಿದ್ದರು ಎಂದು ವಿವರಿಸಿದರು.
ಕಾಂಗ್ರೆಸ್ನಿವರು 2015- 2019ರ ನಡುವೆ ಯಾಕೆ ಅದನ್ನು ಮಂಡಿಸಿ ಅನುಷ್ಠಾನ ಮಾಡಿಲ್ಲ ಎಂದು ಕೇಳಿದ ಅವರು, ಈಗ ಅವರು ಕೇವಲ ನಾಟಕ ಆಡುತ್ತಿದ್ದಾರೆ ಎಂದು ತಿಳಿಸಿದರು.
ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗಿ ದೇಶದೊಳಗೆ ಬಂದ ಹಿಂದೂ, ಬೌದ್ಧ, ಈಸಾಯಿಗಳಿಗೆ ಪೌರತ್ವ ಕೊಡುವ ವಿಚಾರದಲ್ಲಿ ತಾರತಮ್ಯ ನಡೆದಿದೆ ಎಂದು ಹೇಳುತ್ತಿದ್ದವರೇ ಈಗ ಸಮಾನ ನಾಗರಿಕ ಸಂಹಿತೆಯನ್ನು ವಿರೋಧಿಸುತ್ತಿದ್ದಾರೆ. ಅದರಲ್ಲೇ ಅವರ ನಾಟಕ ಬಯಲಾಗಿದೆ. ಪಾಕಿಸ್ಥಾನ, ಅಪಘಾನಿಸ್ಥಾನದಿಂದ ಯಾವೊಬ್ಬ ಮುಸ್ಲಿಮರೂ ದೌರ್ಜನ್ಯದ ಕಾರಣಕ್ಕೆ ಭಾರತಕ್ಕೆ ಬಂದಿಲ್ಲ ಎಂದು ವಿವರಿಸಿದರು.