ವೃಷಬಾವತಿ ನದಿಯ ಕೊಳಚೆ ನೀರನ್ನು ಮುಂದಿನ 5 ವರ್ಷಗಳಲ್ಲಿ ರೂ.1500.00 ಕೋಟಿಗಳ ವೆಚ್ಚದಲ್ಲಿ ಮೂರನೇ ಹಂತದಲ್ಲಿ ಸಂಸ್ಕರಣೆ ಮಾಡಿ ಕೃಷಿಗೆ ಹಾಗೂ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಅನುಷ್ಟಾನಗೊಳಿಸುವುದಾಗಿ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ ರವರು ಬಿಡದಿಯ ಲ್ಲಿನಡೆದ ಮಾಧ್ಯಮ ಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಸಚಿವ ಯೋಗೇಶ‍್ವರ ರವರು ಇಂದು ಬೆಳಿಗ್ಗೆ ಬೆಂಗಳೂರಿನ ಮೈಸೂರು ರಸ್ತೆಯ ಶ್ರೀ ಗಾಳಿ ಆಂಜನೇಯ ದೇವಾಲಯದಿಂದ ಬಿಡದಿಯ ಬೈರಮಂಗಲ ಕೆರೆಯವರೆಗೂ ವೃಷಬಾವತಿ ನದಿಯನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ಬೆಂಗಳೂರು ನಗರದ ಶೇ.40 ರಷ್ಟು ತ್ಯಾಜ್ಯ ನೀರು ವೃಷಬಾವತಿ ನದಿ ಮೂಲಕ ಬಿಡದಿಯ ಬೈರಮಂಗಲ ಕೆರೆಗೆ ಸೇರುತ್ತೀದೆ. ಪ್ರಸಕ್ತ ಕೇವಲ ಎರಡು ಹಂತದಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲಾಗುತ್ತಿದ್ದು, ಈ ನೀರು ಕೃಷಿ ಸೇರಿದಂತೆ ಯಾವುದಕ್ಕೂ ಬಳಸಲು ಸಾಧ್ಯವಿಲ್ಲ. ಇನ್ನೊಂದೆಡೆ ಸಂಸ್ಕರಣೆ ಮಾಡಿದ ನೀರನ್ನು ಚರಂಡಿಗಳಿಗೆ ಹರಿಸುತ್ತಿದ್ದು, ಯಾವುದೇ ಪ್ರಯೋಜನಕ್ಕೆ ಬರುತ್ತಿಲ್ಲ.
ಬೆಂಗಳೂರು ನಗರದ ವೃಷಬಾವತಿ ಕಣಿವೆ ವ್ಯಾಪ್ತಿಯಲ್ಲಿ ಹರಿಯುವ 1500 ಎಂ.ಎಲ್.ಡಿ ತ್ಯಾಜ್ಯ ನೀರನ್ನು ಮೂರು ಹಂತಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆ ಮಾಡಿ, ಕೆರೆಗಳನ್ನು ತುಂಬಿಸುವುದು ಹಾಗೂ ಕೃಷಿ ಚಟುವಟಿಕೆಗಳಿಗೆ ಬಳಸುವುದು ನಮ್ಮ ಉದ್ದೇಶವಾಗಿದೆ.