ಕೊರೋನಾ ಮೂರನೇ ಹಂತದ ಹೋರಾಟವನ್ನು ಸಮರ್ಥವಾಗಿ ಎದುರಿಸಲು ನಾವೆಲ್ಲ ಸಜ್ಜಾಗಬೇಕಿದೆ ಎಂದು ಸರಕಾರ ಹೇಳಿದೆ.
ಕೊರೋನಾ ಮೂರನೇ ಹಂತದ ಹೋರಾಟವನ್ನು ಸಮರ್ಥವಾಗಿ ಎದುರಿಸಲು ನಾವೆಲ್ಲ ಸಜ್ಜಾಗಬೇಕಿದೆ ಎಂದು ರಾಜ್ಯದ ಉಪಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಮತ್ತು ಲೋಕೋಪಯೋಗಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ ಹೇಳಿದ್ದಾರೆ.
ಕಲಬುರಗಿ ಜಿಲ್ಲೆಗೆ ಬೇಕಾಗಿರುವ ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ವೈದ್ಯಕೀಯ ಉಪಕರಣಗಳು, ಮೆಡಿಸಿನ್‍ಗಳ ಬಗ್ಗೆ ಪಟ್ಟಿ ಮಾಡಿ ಬೆಂಗಳೂರಿನಲ್ಲಿ ಸ್ಥಾಪಿಸಿರುವ ಕೊರೋನಾ ವಾರ್ ರೂಂಗೆ ಕಳುಹಿಸಿದಲ್ಲಿ ಸರಬರಾಜಿಗೆ ಕ್ರಮ ವಹಿಸಲಾಗುತ್ತದೆ. ವಾರ್ ರೂಂನಲ್ಲಿ ಖುದ್ದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಅವರು ಇದರ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದರು.
ಕಲಬುರಗಿ ಜಿಲ್ಲೆಯಲ್ಲಿ ಪ್ರಸ್ತುತ 40 ವೆಂಟಿಲೇಟರ್‍ಗಳಿದ್ದು, ಇದು ಸಾಕಾಗುವುದಿಲ್ಲ. ಮಹಿಂದ್ರಾ ಕಂಪನಿಯವರು 7500 ರೂ. ಬೆಲೆಯಲ್ಲಿ ವೆಂಟಿಲೇಟರ್ ತಯಾರಿಸಿ ಕೊಡಲು ಮುಂದೆ ಬಂದಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಇಂತಹ 100 ವೆಂಟಿಲೇಟರ್ ಖರೀದಿಸಬೇಕು ಎಂದು ಡಿ.ಸಿ. ಶರತ್ ಬಿ. ಅವರಿಗೆ ಡಿ.ಸಿ.ಎಂ ನಿರ್ದೇಶನ ನೀಡಿದರು.
ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳು 24 ಗಂಟೆಗಳ ಕಾಲ ಕಾರ್ಯನಿರ್ವಹಿಸಬೇಕು. ಅದೇ ರೀತಿ ಗ್ರಾಮಗಳಲ್ಲಿ ಪಿ.ಡಿ.ಒ.ಗಳು ಕೇಂದ್ರಸ್ಥಾನದಲ್ಲಿದ್ದು, ಸೇವೆಗೆ ಸದಾ ಸಿದ್ಧರಿರಬೇಕು ಎಂದರು.