ಸಿದ್ಧಗಂಗಾ ಮಠದ ಯಾವುದೇ ವಿದ್ಯಾರ್ಥಿಗಳಿಗೆ ಕೋವಿಡ್ - 19 ಸೋಂಕು ಇಲ್ಲ ಎಂದು ಮಠದ ಅಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮಿಗಳು ಸ್ಪಷ್ಟ ಪಡಿಸಿದ್ದಾರೆ.
ಆಂಧ್ರಪ್ರದೇಶದಿಂದ ಬಂದಿದ್ದ ವಿದ್ಯಾರ್ಥಿ ಓರ್ವನಲ್ಲಿ ಸೋಂಕು ಇರುವ ಶಂಕೆಯಿಂದ ಆತನನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರ ವರದಿ ನೆಗೆಟಿವ್ ಬಂದಿದ್ದು, ವಿದ್ಯಾರ್ಥಿ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಆ ವಿದ್ಯಾರ್ಥಿ ಜೊತೆಗಿದ್ದ 120 ಮಕ್ಕಳನ್ನು ಪರೀಕ್ಷೆ ಮಾಡಲಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ. ಮೂವರು ಮಕ್ಕಳು ಕ್ವಾರಂಟೈನ್ ನಿಂದ ಇನ್ನೊಂದೆರಡು ದಿನದಲ್ಲಿ ಬಿಡುಗಡೆ ಆಗಲಿದ್ದಾರೆ. ಮಠದ ಯಾವುದೇ ವಿದ್ಯಾರ್ಥಿಗಳು, ಪೋಷಕರು ಆತಂಕಕ್ಕೆ ಒಳಗಾಗಬಾರದು ಎಂದಿದ್ದಾರೆ.
ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅವರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಸಂಬಂಧ ಸಿದ್ಧಲಿಂಗಶ್ರೀಗಳೊಂದಿಗೆ ಮಾತುಕತೆ ನಡೆಸಿದ್ದು, ನಿಗದಿಯಂತೆ ಪರೀಕ್ಷೆ ನಡೆಸಲು ಹಾಗೂ ಮಠದಲ್ಲಿರುವ ವಿದ್ಯಾರ್ಥಿಗಳಿಗೆ ನಿತ್ಯ ಮೆಡಿಕಲ್ ಸ್ಕ್ರೀನಿಂಗ್ ನೆಡೆಸಲು ಸಿಬ್ಬಂದಿಯನ್ನು ಹಾಗೂ ನೋಡಲ್ ಅಧಿಕಾರಿಯನ್ನು ನೇಮಿಸುವುದಾಗಿ ತಿಳಿಸಿದ್ದಾರೆ.