ಕೊರೊನಾ ಸೋಂಕಿನಿಂದ ಬಳಲುತ್ತಿರುವ ರೋಗಿಗಳಿಗೆ ನೀಡುವ ಔಷಧ ಮತ್ತು ಚಿಕಿತ್ಸೆ ಬಗ್ಗೆ ಪರಿಷ್ಕೃತ ಕ್ಲಿನಿಕಲ್ ಮಾರ್ಗಸೂಚಿ ಬಿಡುಗಡೆ ಮಾಡಿರುವ ಆರೋಗ್ಯ ಸಚಿವಾಲಯ, ವೈದ್ಯರು ಚಿಕಿತ್ಸೆಗಾಗಿ ಸ್ಟಿರಾಯ್ಡ್‌ಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಹೇಳಿದೆ.
ಕೊರೊನಾ ಎರಡನೇ ಅಲೆಯ ಸಮಯದಲ್ಲಿ ಸ್ಟಿರಾಯ್ಡ್‌ಗಳ ಅತಿಯಾದ ಬಳಕೆಗೆ ಕೊರೊನಾ ಟಾಸ್ಕ್ ಫೋರ್ಸ್ ಮುಖ್ಯಸ್ಥರು ವಿಷಾದ ವ್ಯಕ್ತಪಡಿಸಿದ್ದರು. ಇದರ ಬೆನ್ನಲೆಯಲ್ಲೇ ಪರಿಷ್ಕೃತ ಮಾರ್ಗಸೂಚಿಗಳು ಬಂದಿವೆ.
ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ AIIMS, ICMR- ಕೋವಿಡ್ ರಾಷ್ಟ್ರೀಯ ಟಾಸ್ಕ್ ಫೋರ್ಸ್ ಮತ್ತು ಜಾಯಿಂಟ್ ಮಾನಿಟರಿಂಗ್ ಗ್ರೂಪ್ (DGHS) ಈ ಪರಿಷ್ಕೃತ ಕ್ಲಿನಿಕಲ್ ಮಾರ್ಗಸೂಚಿಗಳನ್ನು ನೀಡಿವೆ.
ಸ್ಟಿರಾಯ್ಡ್‌ಗಳಂತಹ ಔಷಧಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಥವಾ ಅಗತ್ಯಕ್ಕಿಂತ ಹೆಚ್ಚು ಕಾಲ ಬಳಸಿದಾಗ ಆಕ್ರಮಣಕಾರಿ ಮ್ಯೂಕಾರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರ ದಂತಹ ಸೆಕೆಂಡರಿ ಸೋಂಕಿನ ಅಪಾಯ ಉಂಟಾಗಬಹುದು ಎಂದು ಪರಿಷ್ಕೃತ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ.
ಎರಡು-ಮೂರು ವಾರಗಳಿಗಿಂತ ಹೆಚ್ಚು ಕಾಲ ಕೆಮ್ಮು ಮುಂದುವರಿದರೆ ಕಡ್ಡಾಯವಾಗಿ ಕ್ಷಯರೋಗ ಮತ್ತು ಇತರ ಪರೀಕ್ಷೆಗಳಿಗೆ ರೋಗಿಯನ್ನು ಒಳಪಡಿಸಬೇಕು ಎಂದು ಮಾರ್ಗಸೂಚಿಗಳು ಹೇಳುತ್ತವೆ.
ಪರಿಷ್ಕೃತ ಮಾರ್ಗದರ್ಶನದ ಪ್ರಕಾರ, ಉಸಿರಾಟದ ತೊಂದರೆ ಅಥವಾ ಹೈಪೋಕ್ಸಿಯಾ ಇಲ್ಲದ ರೋಗಲಕ್ಷಣಗಳನ್ನು ಸೌಮ್ಯ ಕಾಯಿಲೆ ಎಂದು ವರ್ಗೀಕರಿಸಲಾಗಿದೆ. ಇವರಿಗೆ ಮನೆಯಲ್ಲಿ ಪ್ರತ್ಯೇಕವಾಗಿರಿಸಲು ಮತ್ತು ಅಲ್ಲಿಯೇ ಆರೈಕೆ ಮಾಡಲು ಸಲಹೆ ಮಾಡಲಾಗಿದೆ. ಕೋವಿಡ್‌ನ ಸೌಮ್ಯ ಲಕ್ಷಣಗಳಿಂದ ಬಳಲುತ್ತಿರುವವರು ಉಸಿರಾಟದ ತೊಂದರೆ, ತೀವ್ರತರವಾದ ಜ್ವರ ಅಥವಾ ಐದು ದಿನಗಳಿಗಿಂತ ಹೆಚ್ಚು ಕಾಲ ತೀವ್ರವಾದ ಕೆಮ್ಮನ್ನು ಹೊಂದಿದ್ದರೆ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು.
90 ರಿಂದ 93% ಏರಿಳಿತದ ಆಮ್ಲಜನಕದ ಸ್ಯಾಚುರೇಷನರ್ ಇದ್ದು, ಉಸಿರಾಟದ ತೊಂದರೆ ಇರುವವರನ್ನು ಮಧ್ಯಮ ಪ್ರಕರಣಗಳಾಗಿ ಪರಿಗಣಿಸಲಾಗುತ್ತದೆ. ಅಂತಹ ರೋಗಿಗಳಿಗೆ ಆಮ್ಲಜನಕ ಬೆಂಬಲವನ್ನು ನೀಡಬೇಕು.
ಇನ್ನು ಶೇಕಡಾ 90 ಕ್ಕಿಂತ ಕಡಿಮೆ ಆಮ್ಲಜನಕದ ಸ್ಯಾಚುರೇಷನರ್ ಇರುವವರನ್ನು ತೀವ್ರ ಕಾಯಿಲೆ ಎಂದು ಪರಿಗಣಿಸಿ,ಅವರನ್ನು ಐಸಿಯುಗೆ ಸೇರಿಸಬೇಕು ಎಂದು ಪರಿಷ್ಕೃತ ಮಾಗಸೂಚಿಗಳು ತಿಳಿಸಿವೆ.
ಕಳೆದ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀತಿ ಆಯೋಗದ ಸದಸ್ಯ, (ಆರೋಗ್ಯ) ಮತ್ತು ಕೋವಿಡ್ ಟಾಸ್ಕ್ ಫೋರ್ಸ್ ಮುಖ್ಯಸ್ಥರಾದ ಡಾ ವಿ.ಕೆ ಪಾಲ್, ಸ್ಟೀರಾಯ್ಡ್‌ಗಳಂತಹ ಔಷಧಗಳ ಅತಿಯಾದ ಬಳಕೆ ಮತ್ತು ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.