ಕೊರೊನಾ ರೋಗಿಗಳು ಬರದೇ ಇರುವುದಕ್ಕೆ ರಾಜ್ಯದ ಸಚಿವರೊಬ್ಬರು ಬೇಸರ ವ್ಯಕ್ತಪಡಿಸಿ, ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಹರಿಹಾಯ್ದಿದ್ದಾರೆ.
ಕೊರೊನಾ ವೈರಸ್ ರೋಗಿಗಳ ಚಿಕಿತ್ಸೆಗೆ ಎಲ್ಲೆಡೆಯೂ ಆಸ್ಪತ್ರೆಯಲ್ಲಿ ಬೆಡ್ ಫುಲ್ ಆಗಿವೆ. ಆದರೆ ಹುಬ್ಬಳ್ಳಿಯ ಇಎಸ್ಐ ಆಸ್ಪತ್ರೆಯಲ್ಲಿ ಯಾವೊಂದು ಕೊರೊನಾ ಸೋಂಕಿತರು ಚಿಕಿತ್ಸೆಗೆ ದಾಖಲಾಗದೇ ಇರುವುದು ಬೇಸರದ ಸಂಗತಿ ಎಂದು ಇಎಸ್ಐ ಆಸ್ಪತ್ರೆಯ ಆಡಳಿತ ಮಂಡಳಿಯನ್ನು ಸಚಿವ ಶಿವರಾಮ ಹೆಬ್ಬಾರ ತರಾಟೆಗೆ ತೆಗೆದುಕೊಂಡರು.
ಇಎಸ್ಐ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಆಸ್ಪತ್ರೆಯಲ್ಲಿ ಆಡಳಿತ ಮಂಡಳಿಯ ನಿಷ್ಕಾಳಜಿ ಕುರಿತು ಬೇಸರ ವ್ಯಕ್ತಪಡಿಸಿದರು. ಈಗಾಗಲೇ ಖಾಸಗಿ ಆಸ್ಪತ್ರೆಯಲ್ಲಿ ಕೂಡ ಬೆಡ್ ಫುಲ್ ಆಗುತ್ತಾ ಬಂದಿದ್ದರೂ ಇಎಸ್ಐ ಆಸ್ಪತ್ರೆಯಲ್ಲಿ ಯಾವೊಂದು ಸೋಂಕಿತ ವ್ಯಕ್ತಿಯು ಚಿಕಿತ್ಸೆಗೆ ದಾಖಲಾಗಿಲ್ಲ ಎಂದರೆ ಹೇಗೆ? ಎಂದರು.
ಕೋಟ್ಯಾಂತರ ರುಪಾಯಿ ವೆಚ್ಚ ಮಾಡಿ ಸಾರ್ವಜನಿಕರ ಸೇವೆಗೆ ಕೈ ಜೋಡಿಸಲಾಗಿದೆ. ಆದರೆ ಸೂಕ್ತ ವ್ಯವಸ್ಥೆ ಕೊರತೆಯಿಂದ ಅವ್ಯವಸ್ಥೆ ಉಂಟಾಗಿದೆ ಎಂದು ವೈದ್ಯರಿಗೆ ಹಾಗೂ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು.