ಬೆಂಗಳೂರು : ಹೊಸ ತಳಿಯ ಕೊವಿಡ್19 ವೈರಾಣು ಆತಂಕ ಹಿನ್ನೆಲೆ ಸೋಮವಾರ ಅಥವಾ ಮಂಗಳವಾರ ಆರೋಗ್ಯ ಇಲಾಖೆ ಹಾಗೂ ತಾಂತ್ರಿಕ ಸಲಹಾ ಸಮಿತಿ ಜೊತೆ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಸಭೆ ನಡೆಸಲಿದ್ದಾರೆ.
ಆರೋಗ್ಯ ಸಚಿವ ಸುಧಾಕರ್ ಆರೋಗ್ಯ ಇಲಾಖೆ ಜೊತೆ ಪ್ರತ್ಯೇಕ ಸಭೆ ನಡೆಸಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ತಾಂತ್ರಿಕ ಸಲಹಾ ಸಮಿತಿ ಜೊತೆಗೂ ಮಹತ್ವದ ಸಮಾಲೋಚನೆ ನಡೆಸಲಿದ್ದಾರೆ. ಜಿನೋಮಿಕ್ ಸೀಕ್ವೆನ್ಸ್ ಕುರಿತು ಸರ್ಕಾರ ಹೆಚ್ಚಿನ ಲಕ್ಷ್ಯ ವಹಿಸಿದೆ. ಕಳೆದ 15 ದಿನಗಳ ಹಿಂದೆಯೇ ಒಮಿಕ್ರಾನ್ ಮಾದರಿಯ ಕೊವಿಡ್ ತಳಿ ಎಂಟ್ರಿ ಕೊಟ್ಟಿದೆಯಾ ಎಂಬ ಪರಿಶೀಲನೆ ನಡೆಸಲಿದ್ದಾರೆ.
ಈ ಸಂಬಂಧ, ಕಳೆದ 15 ದಿನಗಳ ಹಿಂದೆಯೇ ಕೇರಳದಿಂದ ಬಂದ ವಿದ್ಯಾರ್ಥಿಗಳ ಮರು ಪರೀಕ್ಷೆ ನಡೆಸಬೇಕಿದೆ. ಮರು ಪರೀಕ್ಷೆ ಮೂಲಕ ಹೊಸ ತಳಿ ಎಂಟ್ರಿ ಕೊಟ್ಟಿಲ್ಲ ಎನ್ನುವುದನ್ನು ಸರ್ಕಾರ ಖಚಿತಪಡಿಸಿಕೊಳ್ಳಲಿದೆ.
ಆತಂಕಕಾರಿ ವೈರಸ್ ಬಗ್ಗೆ ನಿನ್ನೆಯಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ಖಡಕ್ ಸೂಚನೆ ಕೊಟ್ಟಿದ್ದಾರೆ. ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿರ್ದಿಷ್ಟ ಮಾರ್ಗಸೂಚಿ ಕ್ರಮ ಅನುಸರಿಸಲು ಆರೋಗ್ಯ ಸಚಿವರು ಸಭೆ ನಡೆಸಲಿದ್ದಾರೆ.