Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕಾಂಗ್ರೆಸ್ ಪಕ್ಷ ಶಾಶ್ವತವಾಗಿ ಮೂಲೆಗುಂಪಾಗುವ ಸಮಯ ಸನಿಹದಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಈ ಸಂಬಂಧ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಜಾತಿಗಳ ನಡುವೆ, ಮತೀಯ ಸಂಘರ್ಷ ಹೆಚ್ಚಿಸುವ ಪಕ್ಷವಾದರೆ, ಬಿಜೆಪಿ ಸದಾ ಜನಹಿತ ಮತ್ತು ಅಭಿವೃದ್ಧಿಗಾಗಿ ಶ್ರಮಿಸುವ ಪಕ್ಷ ಎಂಬುದು ಜನರಿಗೆ ಅರಿವಾಗಿದೆ.
ಕಾಂಗ್ರೆಸ್ ಪಕ್ಷದ ಆರು ದಶಕಗಳ ಭ್ರಷ್ಟಾಚಾರ, ಸಾಲು ಸಾಲು ಹಗರಣಗಳನ್ನು ಗಮನಿಸಿದ ಮಹಾಜನತೆ ಕಾಂಗ್ರೆಸ್ ಪಕ್ಷವನ್ನು ಶಾಶ್ವತವಾಗಿ ಮೂಲೆಗುಂಪು ಮಾಡುವ ನಿರ್ಧಾರ ಮಾಡಿದ್ದಾರೆ.
ರಾಹುಲ್ ಗಾಂಧಿಯವರು ಭಾರತ್ ಜೋಡೋ ಮೂಲಕ ಕರ್ನಾಟಕಕ್ಕೆ ಪ್ರವೇಶ ಮಾಡುವ ಸಂದರ್ಭದಲ್ಲೇ ಇಲ್ಲಿನ ಕಾಂಗ್ರೆಸ್ ಮುಖಂಡರು ಎರಡು ತಂಡಗಳಾಗಿ ಸ್ವಾಗತ ಮಾಡಿದ್ದಾರೆ. ಮುಖ್ಯಮಂತ್ರಿ ಕುರ್ಚಿಯ ಹಗಲುಕನಸು ಕಾಣುವ ಸಿದ್ದರಾಮಯ್ಯ ಒಂದೆಡೆ ಸ್ವಾಗತ ಕೋರಿದರೆ, ಜೈಲಿನತ್ತ ಮುಖ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಮತ್ತು ಹಗರಲಿರುಳೂ ಸಿಎಂ ಕುರ್ಚಿಯ ತಿರುಕನ ಕನಸು ಕಾಣುವ ಡಿ.ಕೆ.ಶಿವಕುಮಾರ್ ಮತ್ತೊಂದೆಡೆ ರಾಹುಲ್ ಗಾಂಧಿಯವರನ್ನು ಸ್ವಾಗತಿಸಿದ್ದಾರೆ. ಇದು ಕಾಂಗ್ರೆಸ್ ಭಿನ್ನಮತಕ್ಕೆ ಸ್ಪಷ್ಟ ನಿದರ್ಶನ. ಇದನ್ನು ಜನತೆ ಗಮನಿಸಿದ್ದಾರೆ ಎಂದು ಕಟೀಲ್ ಹೇಳಿದ್ದಾರೆ.