ಬೆಂಗಳೂರು, ಸೆ.19 : ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಬಿಜೆಪಿ ಜೊತೆ ಕೈ ಜೋಡಿಸಲಿದೆ ಎಂಬ ಸುಳಿವು ಸಿಗುತ್ತಿದ್ದಂತೆ ಸಿಟ್ಟಾಗಿರುವ ಕಾಂಗ್ರೆಸ್ ನಾಯಕರು ಆಪರೇಷನ್ ಹಸ್ತದ ಮೂಲಕ ಜೆಡಿಎಸ್ನ ಹಲವಾರು ನಾಯಕರನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳಲು ವೇದಿಕೆ ಸಜ್ಜುಗೊಳಿಸುತ್ತಿದ್ದಾರೆ.
ಶಾಸಕರಾಗಿರುವ ಚಾಮುಂಡೇಶ್ವರಿ ಕ್ಷೇತ್ರದ ಜಿ.ಟಿ.ದೇವೇಗೌಡ, ಕೋಲಾರದ ಶ್ರೀನಿವಾಸಗೌಡ ಅವರು ಕಾಂಗ್ರೆಸ್ ಸೇರುವುದಾಗಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಮಾನಸಿಕವಾಗಿ ಕಾಂಗ್ರೆಸ್ ಜೊತೆ ಗುರುತಿಸಿಕೊಳ್ಳುತ್ತಿದ್ದಾರೆ.
ಮಾಜಿ ಶಾಸಕ ಕೋನರೆಡ್ಡಿ ಕೂಡ ಕಾಂಗ್ರೆಸ್ ಬಾಗಿಲು ತಟ್ಟಿದ್ದಾರೆ. ಚಿಂತಾಮಣಿಯಲ್ಲಿ ಪಕ್ಷೇತರರಾಗಿದ್ದ ಮಾಜಿ ಶಾಸಕರು ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತ ಪಡಿಸಿದ್ದಾರೆ. ಜೊತೆಗೆ ಕಳೆದ ಚುನಾವಣೆಯಲ್ಲಿ ಜೆಡಿಎಸ್ನಿಂದ ಸ್ರ್ಪಸಿದ್ದ ಏಳೆಂಟು ಮಂದಿ ಕಾಂಗ್ರೆಸ್ಗೆ ಅರ್ಜಿ ಹಾಕಿದ್ದು, ಅಲ್ಲಂ ವೀರಭದ್ರಪ್ಪ ಅವರ ಸಮಿತಿ ಆ ಹೆಸರುಗಳನ್ನು ಪರಿಶೀಲನೆ ನಡೆಸುತ್ತಿದೆ. ಶಾಸಕರ ಸೇರ್ಪಡೆ ಕುರಿತು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪರಿಶೀಲನೆ ನಡೆಸುತ್ತಿದ್ದಾರೆ.
ಒಂದೆಡೆ ಜೆಡಿಎಸ್ನ ನಾಯಕರಿಗೆ ಗಾಳ ಹಾಕಿ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ನಡೆಯುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ಕಾಂಗ್ರೆಸ್ನ ಗುರಿಯಾಗಿದೆ. ಸ್ಥಳೀಯ ಮಟ್ಟದಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಆಡಳಿತಾರೂಢ ಬಿಜೆಪಿಗೆ ಸೋಲಿನ ರುಚಿ ತೋರಿಸಲೇಬೇಕು ಎಂದು ಕಾಂಗ್ರೆಸ್ ತರಾವರಿ ರಣತಂತ್ರಗಳನ್ನು ರೂಪಿಸುತ್ತಿದೆ.