ಬೆಂಗಳೂರು: ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕುಟುಂಬ ಕೆಐಎಡಿಬಿ ಜಮೀನು ಅಕ್ರಮವಾಗಿ ಪಡೆದಿದ್ದಾರೆ ಎಂದು ಆರೋಪವಾಗಿರುವ ಬೆನ್ನಲ್ಲೇ ವಕ್ಫ್ ಆಸ್ತಿ ಕಬಳಿಕೆ ಆರೋಪವೊಂದು ಕೇಳಿಬಂದಿದೆ.
ಇದನ್ನು ಮಾಡಿರುವುದು ಅಲ್ಪ ಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಯವರೇ ಆರೋಪಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ. ಖರ್ಗೆ ಕುಟುಂಬ ವಕ್ಫ್ ಬೋರ್ಡ್ ಆಸ್ತಿಯನ್ನು ಅಕ್ರಮವಾಗಿ ಕಬಳಿಕೆ ಮಾಡಿಕೊಂಡಿತ್ತು ಎಂದು ಆರೋಪಿಸಿರುವುದಾಗಿ ಬಿಜೆಪಿ ಹೇಳಿದೆ.
ಈಗಷ್ಟೇ ಕೆಐಎಡಿಬಿ ಜಮೀನನ್ನು ಖರ್ಗೆ ಕುಟುಂಬಕ್ಕೆ ಅಕ್ರಮವಾಗಿ ನೀಡಲಾಗಿತ್ತು. ಎಂದು ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ 5 ಎಕರೆ ಜಮೀನು ಪಡೆದಿರುವುದನ್ನು ಒಪ್ಪಿಕೊಂಡಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅದನ್ನು ಸಮರ್ಥನೆಯೂ ಮಾಡಿಕೊಂಡಿದ್ದರು. ಅದರ ಬೆನ್ನಲ್ಲೇ ತಮ್ಮ ಟ್ರಸ್ಟ್ ಗೆ ನೀಡಲಾಗಿದ್ದ ಜಮೀನನ್ನು ಹಿಂಪಡೆಯಲು ಕೆಐಎಡಿಬಿಗೆ ಪತ್ರ ಬರೆದಿದ್ದರು.
ಇದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು. ಮರಳಿ ನೀಡಿದ್ದಾರೆ ಎಂದರೆ ಅವರು ಅಕ್ರಮ ಮಾಡಿದ್ದಾರೆ ಎಂದೇ ಅರ್ಥ ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದರು. ಇದರ ನಡುವೆ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಕಾಂಗ್ರೆಸ್ ನಾಯಕರು ವಕ್ಫ್ ಆಸ್ತಿಯನ್ನು ಕಬಳಿಕೆ ಮಾಡಿಕೊಂಡಿದ್ದಾರೆ ಎಂದು ದೂರಿದ್ದರು. ಅದರ ಬೆನ್ನಲ್ಲೇ ಈಗ ರಾಜ್ಯ ಬಿಜೆಪಿ ಘಟಕ ಖರ್ಗೆ ಕುಟುಂಬ ವಕ್ಫ್ ಆಸ್ತಿ ಕಬಳಿಕೆ ಮಾಡಿತ್ತು ಎಂದು ಅನ್ವರ್ ಮಾಣಿಪ್ಪಾಡಿ ಹೇಳಿದ್ದರು ಎಂದು ಆರೋಪಿಸಿದೆ.