ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಒತ್ತಡದ ನಡುವೆಯೇ ಸಿಎಂ ಯಡಿಯೂರಪ್ಪ ಇಂದು ವರಿಷ್ಠರ ಜತೆ ಚರ್ಚಿಸಲು ದೆಹಲಿಗೆ ತೆರಳಿದ್ದಾರೆ.
ಬಿಜೆಪಿ ರಾಷ್ಟ್ರಾಧ‍್ಯಕ್ಷ ಜೆಪಿ ನಡ್ಡಾ ಜತೆ ಚರ್ಚಿಸಿ ಅಂತಿಮ ಪಟ್ಟಿ ತಯಾರಿಸಲಿದ್ದಾರೆ. ಅತ್ತ ಅನರ್ಹರಿಗೂ ಅಸಮಾಧಾನವಾಗದಂತೆ ಇತ್ತ ಮೂಲ ಬಿಜೆಪಿಯವರಿಗೂ ಅತೃಪ್ತಿಯಾಗದಂತೆ ಸಚಿವ ಸ್ಥಾನ ಹಂಚಿಕೆ ಮಾಡುವ ಸಂಕಟದಲ್ಲಿ ಸಿಎಂ ಇದ್ದಾರೆ.
ರಮೇಶ್ ಜಾರಕಿಹೊಳಿಗೆ ಡಿಸಿಎಂ ಪಟ್ಟ ನೀಡಬೇಕು ಎಂಬುದು ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದ ಶಾಸಕರ ಒತ್ತಾಯ. ಆದರೆ ಹೊಸದಾಗಿ ಯಾರನ್ನೂ ಡಿಸಿಎಂ ಮಾಡಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಜಾರಕಿಹೊಳಿ ಟೀಂನಲ್ಲಿ ಸಹಜವಾಗಿಯೇ ಅಸಮಾಧಾನ ಹೊಗೆಯಾಡುತ್ತಿದೆ. ಇದನ್ನು ಸಿಎಂ ಹೇಗೆ ನಿಭಾಯಿಸುತ್ತಾರೆ ಎಂದು ಕಾದುನೋಡಬೇಕಿದೆ.