Select Your Language

Notifications

webdunia
webdunia
webdunia
webdunia

ದೇವೇಗೌಡರ ಸುಳ್ಳು ಕೇಳಿ ನನಗೇ ನಾಚಿಕೆಯಾಯ್ತು: ಸಿಎಂ ಸಿದ್ದರಾಮಯ್ಯ

Siddaramaiah

Krishnaveni K

ಚಿಕ್ಕಮಗಳೂರು , ಸೋಮವಾರ, 22 ಏಪ್ರಿಲ್ 2024 (16:37 IST)
ಚಿಕ್ಕಮಗಳೂರು: ವಾಜಪೇಯಿಯವರ ಇಂಡಿಯಾ ಶೈನಿಂಗ್ ಎನ್ನುವ ಸುಳ್ಳು ಪ್ರಚಾರ ಸೋತ ಹಾಗೆಯೇ ಮೋದಿಯವರ ವಿಕಸಿತ ಭಾರತ ಎನ್ನುವ ಸುಳ್ಳಿನ ಪ್ರಚಾರಕ್ಕೂ ಸೋಲಾಗುತ್ತದೆ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. 
 
ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಬೃಹತ್ ಪ್ರಜಾಧ್ವನಿ-2 ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು. 
 
ಹತ್ತತ್ತು ವರ್ಷ ಪ್ರಧಾನಿಯಾಗಿ ಮೋದಿಯವರು ಭಾರತೀಯರಿಗೆ ಸರಣಿ ಸುಳ್ಳುಗಳನ್ನು ನಂಬಿಸಿ ವಂಚಿಸಿದರು. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕ್ತೀವಿ ಎಂದು ನಂಬಿಸಿದರು. ಈಗ ನಂಬಿಕೆ ದ್ರೋಹ ಆಗಿದೆ. 
 
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸ್ತೀವಿ ಎಂದು ದೇಶದ ಯುವಕ/ ಯುವತಿಯರನ್ನು ನಂಬಿಸಿದರು. ವಿದ್ಯಾವಂತರು ಡಬ್ಬಲ್ ಡಿಗ್ರಿ ಪಡೆದು ಉದ್ಯೋಗ ಕೊಡಿ ಎಂದರೆ ಹೋಗಿ ಪಕೋಡ ಮಾರಾಟ ಮಾಡಿ ಎನ್ನುತ್ತಿದ್ದಾರೆ. ಇಂಥಾ ನಂಬಿಕೆ ದ್ರೋಹಗಳು ಪ್ರಧಾನಿ ಕುರ್ಚಿಗೆ ಘನತೆ ತರುತ್ತದೆಯೇ ಎಂದು ಪ್ರಶ್ನಿಸಿದರು. 
 
ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ನಂಬಿಸಿ ರೈತರ ಖರ್ಚು ಮೂರು ಪಟ್ಟು ಮಾಡಿದರು. ಇದು ದೇಶದ ಇಡಿ ದೇಶದ ರೈತ ಕುಲಕ್ಕೆ ಬಗೆದ ನಂಬಿಕೆ ದ್ರೋಹ ಅಲ್ಲವೇ ಎಂದು ಪ್ರಶ್ನಿಸಿದರು. 
 
ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ ಬೆಲೆ ಏರಿಕೆ ಸಂಪೂರ್ಣ ತಡೆಯುವುದಾಗಿ ನಂಬಿಸಿದರು. ಈಗ ಎಲ್ಲದರ ಬೆಲೆ ಆಕಾಶ ಮುಟ್ಟಿದೆ. ಇಂಥಾ ನಂಬಿಕೆ ದ್ರೋಹಗಳನ್ನು ಭಾರತೀಯರಿಗೆ ಬಗೆದಿದ್ದಾರಲ್ಲಾ ಇಂಥಾ ವ್ಯಕ್ತಿಯ ಮುಖ ನೋಡಿ ಮತ ಹಾಕಿದರೆ ನಿಮ್ಮ ಮತಕ್ಕೆ ಘನತೆ ಬರುತ್ತದಾ ಎಂದು ಪ್ರಶ್ನಿಸಿದರು. 
 
ದೇವೇಗೌಡರ ಸುಳ್ಳು ಕೇಳಿ ನನಗೇ ನಾಚಿಕೆ ಆಯ್ತು 
 
ಮೋದಿಯವರ ಜತೆ ಪೈಪೋಟಿಗೆ ಬಿದ್ದವರಂತೆ ದೇವೇಗೌಡರು ಹೇಳಿದ ಸುಳ್ಳುಗಳನ್ನು ಕೇಳಿ ನನಗೇ ನಾಚಿಕೆ ಆಯ್ತು. ದೇವೇಗೌಡರು ಮೋದಿಯವರ ಮಟ್ಟಕ್ಕೆ ಇಳಿದು ಸುಳ್ಳು ಹೇಳಿದ್ರಲ್ಲಾ ಅಂತ ನನಗೇ ನಾಚಿಕೆ ಆಯ್ತು. 
 
ಮೋದಿಯವರು ರಾಜ್ಯದ ಜನತೆಗೆ ಕೊಟ್ಟ ಖಾಲಿ ಚೊಂಬನ್ನು ದೇವೇಗೌಡರು ಅಕ್ಷಯ ಪಾತ್ರೆ ಎಂದು ಸುಳ್ಳು ಹೇಳಿದ್ದಾರೆ. ಚೊಂಬು ಅಕ್ಷಯ ಪಾತ್ರೆ ಆಗಿದ್ದರೆ ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಕೊಡಲು ಏಕೆ ಸಾಧ್ಯವಾಗಲಿಲ್ಲ? ರೈತರ ಸಾಲ ಏಕೆ ಮನ್ನಾ ಮಾಡಲಿಲ್ಲ ಎಂದು ಪ್ರಶ್ನಿಸಿದರು. 
 
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಇಡೀ ದೇಶದ ರೈತರ ಸಾಲ 76 ಸಾವಿರ ಕೋಟಿ ರೂಪಾಯಿಯನ್ನು ಒಂದೇ ಸಾರಿ ಮನ್ನಾ ಮಾಡಿದರು. ಮೋದಿಯವರು 15 ಲಕ್ಷ ಕೋಟಿ ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಮಾಡಿದರು. ಹೀಗಾಗಿ ಮೋದಿಯವರು ರಾಜ್ಯದ, ದೇಶದ ಮಧ್ಯಮ ವರ್ಗ ಮತ್ತು ಬಡವರ ಕೈಗೆ ಖಾಲಿ ಚೊಂಬು ಕೊಟ್ಟರು. ಶ್ರೀಮಂತ ಉದ್ಯಮಿಗಳ ಪಾಲಿಗೆ ಅಕ್ಷಯ ಪಾತ್ರೆ ಆದರು. ಈ ಸತ್ಯ ದೇವೇಗೌಡರಿಗೆ ಗೊತ್ತಿದ್ದೂ ಏಕೆ ರಾಜ್ಯದ ಜನರಿಗೆ ಸುಳ್ಳು ಹೇಳಿದರು ಎಂದು ಪ್ರಶ್ನಿಸಿದರು. 
 
ಪ್ರತೀ ಕುಟುಂಬದ ಹಣ ಉಳಿತಾಯ ಆಗುತ್ತಿದೆ 
 
ನಾವು ನುಡಿದಂತೆ ನಡೆದು ಪ್ರತೀ ಕುಟುಂಬಗಳ ಖಾತೆಗೆ, ಜನರ ಜೇಬಿಗೆ ಹಣ ಹಾಕುತ್ತಿರುವ ನಮ್ಮ ಗ್ಯಾರಂಟಿಗಳಿಗೆ ಮತ ಹಾಕುತ್ತೀರೋ, ಸುಳ್ಳುಗಳ ಸರದಾರನ ಖಾಲಿ ಚೊಂಬಿಗೆ ಮತ ಹಾಕುತ್ತೀರೋ ಯೋಚಿಸಿ ಎಂದು ಕರೆ ನೀಡಿದರು. 
 
ಒಂದೂಕಾಲ ಲಕ್ಷ ಬೇಕೋ- ಖಾಲಿ ಚೊಂಬು ಬೇಕಾ: ಯೋಚಿಸಿ 
 
ರಾಜ್ಯ ಸರ್ಕಾರ ಮಹಿಳೆಯರಿಗೆ ಕೊಡುತ್ತಿರುವ ವಾರ್ಷಿಕ 24 ಸಾವಿರ ರೂಪಾಯಿ ಜತೆಗೆ ರಾಷ್ಟ್ರೀಯ ಕಾಂಗ್ರೆಸ್ ನಿಂದ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಕೊಡುವ ಘೋಷಣೆ ಮಾಡಿ ರಾಹುಲ್ ಗಾಂಧಿ,ಮಲ್ಲಿಕಾರ್ಜುನ ಖರ್ಗೆ ಸಹಿ ಹಾಕಿದ್ದಾರೆ. 
 
ಜತೆಗೆ ಇಡೀ ದೇಶದ ರೈತರ ಸಾಲ ಸಂಪೂರ್ಣ ಮನ್ನಾ, ನಿರುದ್ಯೋಗಿ ಯುವಕರ ಖಾತೆಗೆ ಲಕ್ಷ ರೂಪಾಯಿ ಹಾಕುವ ಗ್ಯಾರಂಟಿಯನ್ನೂ ನಾವು ನೀಡಿದ್ದೇವೆ. ಹೀಗಾಗಿ ಖಾಲಿ ಚೊಂಬಿಗೆ ಮತ ಹಾಕಿ ಹಾಳು ಮಾಡಿಕೊಳ್ತೀರೋ, ನಿಮ್ಮ ಬದುಕಿಗೆ ಸ್ಪಂದಿಸಿ ನಿಮ್ಮ ಜೇಬಿಗೆ ಶಕ್ತಿ ತುಂಬುವ ಗ್ಯಾರಂಟಿ ಕಾಂಗ್ರೆಸ್ಸಿಗೆ ಮತ ಹಾಕ್ತೀರೋ ನಿರ್ಧರಿಸಿ ಎಂದು ಕರೆ ನೀಡಿದರು. 
 
ಕುಮಾರಸ್ವಾಮಿ ಮಾತಿಗೆ ಸಿಎಂ ಆಕ್ರೋಶ 
 
ಸರ್ಕಾರದ ಗ್ಯಾರಂಟಿಗಳನ್ನು ಪಡೆದು ರಾಜ್ಯದ ಮಹಿಳೆಯರು ಹಾದಿ ತಪ್ಪಿದ್ದಾರೆ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆಗೆ ಸಿಟ್ಟಾದ ಸಿಎಂ, ಅವರ ಮನೆಯಲ್ಲೂ ಹೆಣ್ಣುಮಕ್ಕಳಿದ್ದಾರೆ. ಇಂಥಾ ಮಾತು ಹೇಳೋಕೆ ಅವರಿಗೆ ನಾಚಿಕೆಯಾದ್ರೂ ಆಗಲಿಲ್ವಾ ಎಂದು ಖಾರವಾಗಿ ಪ್ರಶ್ನಿಸಿದರು. 
 
ಅಡಿಕೆ ಆಮದು ದೊಡ್ಡ ದ್ರೋಹ
 
ಮೋದಿ ಸರ್ಕಾರ ಅಡಿಕೆಯನ್ನು ವಿದೇಶದಿಂದ ಆಮದು ಮಾಡಿಕೊಂಡು ರಾಜ್ಯದ ಅಡಿಕೆ ಬೆಳೆಗಾರರ ಕುಟುಂಬಕ್ಕೆ ದ್ರೋಹ ಬಗೆದಿದೆ. ಇದಕ್ಕೆ ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮರ್ಮಾಂಗಕ್ಕೆ ಒದ್ದು ದಲಿತ ಯುವಕನನ್ನು ಹತ್ಯೆ ಮಾಡಿದ ಮುಸ್ಲಿಂ ಯುವಕ