Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಿಎಂ ಸಿದ್ದರಾಮಯ್ಯ ಕುರ್ಚಿ ಅಲುಗಾಡುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ

P Rajiv

Krishnaveni K

ಬೆಂಗಳೂರು , ಶನಿವಾರ, 5 ಅಕ್ಟೋಬರ್ 2024 (14:59 IST)
ಬೆಂಗಳೂರು: ಮಾನ್ಯ ಸಿದ್ದರಾಮಯ್ಯನವರು ಜಗ್ಗಲ್ಲ, ಬಗ್ಗಲ್ಲ ಎನ್ನುತ್ತಿದ್ದವರು ಆತ್ಮಸಾಕ್ಷಿಯ ಬಗ್ಗೆ ಮಾತನಾಡುತ್ತಿದ್ದು, ಅವರ ಕುರ್ಚಿ ಅಲುಗಾಡುತ್ತಿರುವುದನ್ನು ಅದು ತೋರಿಸುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ವಿಶ್ಲೇಷಣೆ ಮಾಡಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಸಂದರ್ಭದಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆ ಒತ್ತು ಕೊಡಬೇಕಾದ ಸಚಿವರು ತಮ್ಮ ನಾಯಕರ ಭೇಟಿ ಕಾರ್ಯಕ್ರಮ (ಲೀಡರ್ ರನ್ ಪ್ರೋಗ್ರಾಮ್) ಇಟ್ಟುಕೊಂಡಿದ್ದಾರೆ. ಸತೀಶ್ ಜಾರಕಿಹೊಳಿ ಅವರು ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ್ದಾರೆ. ಎಂ.ಬಿ.ಪಾಟೀಲ್, ಡಾ. ಪರಮೇಶ್ವರ್, ಎಚ್.ಸಿ. ಮಹದೇವಪ್ಪ ಅವರು ಕುರ್ಚಿ ಮೇಲೆ ಟವೆಲ್ ಹಾಕಲು ಪ್ರಯತ್ನ ಮಾಡುತ್ತಿರುವುದು, ಇವೆಲ್ಲವೂ ಕಾಂಗ್ರೆಸ್ಸಿನಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ ಯಾವ ಬದಲಾವಣೆ ಬೇಕಿದ್ದರೂ ಆಗಬಹುದು ಎಂಬುದರ ಸೂಚನೆ ಎಂದು ತಿಳಿಸಿದರು.
ಅಭಿವೃದ್ಧಿ ಸಂಪೂರ್ಣ ನೆಲಕಚ್ಚಿ ಹೋಗಿರುವುದು ಈ ರಾಜ್ಯದ ಜನರ ದುರದೃಷ್ಟ. ಸಚಿವರು ತಮ್ಮ ಆಕಾಂಕ್ಷೆ ವ್ಯಕ್ತಪಡಿಸುವುದರಲ್ಲಿ, ಅದಕ್ಕೆ ಒಳಸಂಚು ರೂಪಿಸುವುದರಲ್ಲಿ ಬ್ಯುಸಿ ಆಗಿದ್ದಾರೆ. ಆದರೆ, ರಾಜ್ಯದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯಿತಿಯನ್ನು ಮುಚ್ಚಿ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆಗೆ ಕುಳಿತಿದ್ದಾರೆ. ಪ್ರಿಯಾಂಕ್ ಖರ್ಗೆಯವರು ತಮ್ಮ ಇಲಾಖೆಯನ್ನು ನಿರ್ವಹಿಸುವಲ್ಲಿ ಸಂಪೂರ್ಣವಾಗಿ ಸೋತು ಹೋಗಿದ್ದಾರೆ. ಪ್ರಿಯಾಂಕ್ ಖರ್ಗೆಯವರೇ, ಗ್ರಾಮ ಪಂಚಾಯಿತಿ ಬಂದ್ ಮಾಡಿ ಫ್ರೀಡಂ ಪಾರ್ಕಿನಲ್ಲಿ ಅಧಿಕಾರಿಗಳು ಧರಣಿ ಮಾಡುವ ಮಟ್ಟಕ್ಕೆ ನೀವು ಇಲಾಖೆ ಬಗ್ಗೆ ಅರಾಜಕತೆಯನ್ನು ಸೃಷ್ಟಿಸಿದ್ದೀರಿ ಎಂದು ಆರೋಪಿಸಿದರು.

ಈ ಅಧಿಕಾರಿಗಳ ಬೇಡಿಕೆ ಸಮರ್ಪಕ ಮತ್ತು ವೈಜ್ಞಾನಿಕವಾಗಿದೆ. ಅವರ ಜೊತೆ ತಾವು ತಕ್ಷಣ ಸ್ಪಂದಿಸಬೇಕು. ಅವರ ಬೇಡಿಕೆ ಈಡೇರಿಸಲು ಬಿಜೆಪಿ ಒತ್ತಾಯಿಸುವುದಾಗಿ ತಿಳಿಸಿದರು. ಪ್ರಿಯಾಂಕ್ ಖರ್ಗೆಗೆ ದೊಡ್ಡ ದೊಡ್ಡ ನಾಯಕರ ಕುರಿತು ಕಾಮೆಂಟ್ ಮಾಡುವುದು ಬಿಟ್ಟರೆ ತಮ್ಮ ಇಲಾಖೆ ನಿರ್ವಹಿಸುವುದು ಗೊತ್ತಾಗುತ್ತಿಲ್ಲ. ಮೂರು ತಿಂಗಳಿಂದ ಶಿಕ್ಷಕರ ವೇತನ ಕೊಟ್ಟಿಲ್ಲ. ಅಂಗನವಾಡಿ ಅಧಿಕಾರಿಗಳಿಗೆ ವೇತನ ಬಂದಿಲ್ಲ ಎಂದು ಆಕ್ಷೇಪಿಸಿದರು.

ಗೃಹಲಕ್ಷ್ಮಿ ಯೋಜನೆಗೆ ಕಾಯಕಲ್ಪ ಸಿಕ್ಕಿಲ್ಲ. ಮಾಧ್ಯಮದವರು ಯಾವಾಗ ಕೇಳಿದರೂ ಇವತ್ತು- ನಾಳೆ ಹಣ ಬಿಡುಗಡೆ ಆಗಲಿದೆ ಎಂದು ಹೇಳುತ್ತ ದಿನಗಳನ್ನು ದೂಡುತ್ತಿದ್ದಾರೆ. ಗೃಹಲಕ್ಷ್ಮಿಯ ಗ್ರಹವನ್ನು ಬಿಡಿಸಲು ನಾವು ಬೆಳಗಾವಿಯ ಲಕ್ಷ್ಮಿಗೆ ವಿನಂತಿ ಮಾಡುತ್ತೇವೆ ಎಂದು ತಿಳಿಸಿದರು.

ಸಚಿವರು ಸಿಎಂ ಕುರ್ಚಿಗೆ ಟವೆಲ್ ಹಾಕುವುದು, ಹೈಕಮಾಂಡ್ ಭೇಟಿಯನ್ನು ಬಿಟ್ಟು ರಾಜ್ಯ, ಜಿಲ್ಲಾ ಪ್ರವಾಸ ಮಾಡಿ ಅಭಿವೃದ್ಧಿ ಕಡೆ ಒತ್ತು ಕೊಡಬೇಕು. ಮುಷ್ಕರನಿರತ ಎಲ್ಲ ಅಧಿಕಾರಿಗಳ ಬೇಡಿಕೆ ಈಡೇರಿಸಿ ಜನಪರ ಕೆಲಸ ಮಾಡಬೇಕೆಂದು ಆಗ್ರಹಿಸಿದರು. ಈಗ ಯಾರದೋ ಮದುವೆಯಲ್ಲಿ ಉಂಡವನೇ ಜಾಣ ಎಂಬ ಸ್ಥಿತಿಯನ್ನು ಕಾಂಗ್ರೆಸ್ ನಿರ್ಮಿಸಿದೆ ಎಂದು ಟೀಕಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಹೆದರಕ್ಕೆ ಸಿಎಂ ಸಿದ್ದರಾಮಯ್ಯ ಏನ್ ದೆವ್ವನಾ: ಎಚ್‌ಡಿ ಕುಮಾರಸ್ವಾಮಿ