ಹುಬ್ಬಳ್ಳಿ: ಉತ್ತರ ಕರ್ನಾಟಕದ ಬಗ್ಗೆ ಸಿಎಂ ಕುಮಾರಸ್ವಾಮಿ ನಿರ್ಲಕ್ಷ ಧೋರಣೆ ತಾಳಿದ್ದಾರೆಂದು ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಅವರ ಹುಬ್ಬಳ್ಳಿಯ ಮನೆಯನ್ನು ಮಾರಾಟ ಮಾಡಲು ಮಾಲಿಕರು ನಿರ್ಧರಿಸಿದ್ದಾರೆ.
ಉತ್ತರ ಕರ್ನಾಟಕದ ಜನರೊಂದಿಗೆ ಸಂಪರ್ಕ ಸಾಧಿಸಲು ಸುಲಭವಾಗುವಂತೆ ಎರಡು ವರ್ಷಗಳ ಹಿಂದೆ ಶಾಸಕ ಬಸವರಾಜ ರಾಯರೆಡ್ಡಿ ಸೋದರ ಸುರೇಶ್ ರಾಯರೆಡ್ಡಿ ಅವರ ಮನೆಯನ್ನು ಸಿಎಂ ಕುಮಾರಸ್ವಾಮಿ ಬಾಡಿಗೆಗೆ ಪಡೆದಿದ್ದರು.
ಆದರೆ ಇಲ್ಲಿ ಕುಮಾರಸ್ವಾಮಿ ಒಮ್ಮೆಯೂ ವಾಸ್ತವ್ಯ ಹೂಡಿಲ್ಲ. ಯಾರೂ ವಾಸ್ತವ್ಯ ಹೂಡದೇ ಪಾಳು ಬಿದ್ದಂತೆ ಮನೆ ಇಟ್ಟುಕೊಳ್ಳುವುದು ಸರಿ ಬರುತ್ತಿಲ್ಲ ಎಂಬ ಕಾರಣಕ್ಕೆ ಮಾಲಿಕ ಸುರೇಶ್ ರಾಯರೆಡ್ಡಿ ಈಗ ಈ ಮನೆಯನ್ನ ಮಾರಲು ತೀರ್ಮಾನಿಸಿದ್ದಾರಂತೆ!
3.5 ಕೋಟಿ ರೂ. ವೆಚ್ಚದಲ್ಲಿ ಈ ಮನೆ ನಿರ್ಮಿಸಲಾದ 4 ಬೆಡ್ ರೂಂ ಬಂಗಲೆ ಇದಾಗಿದೆ. ವಿಶೇಷವೆಂದರೆ ಸುರೇಶ್ ರಾಯರೆಡ್ಡಿ, ಎಚ್ ಡಿಕೆ ಬಳಿಯಿಂದ ಇದಕ್ಕೆ ಬಾಡಿಗೆ ಹಣ ಕೇಳಿರಲಿಲ್ಲವಂತೆ. ಎಚ್ ಡಿಕೆ ಸಿಎಂ ಆದರೆ ನಮ್ಮ ಭಾಗದ ರೈತರಿಗೆ ಅನುಕೂಲವಾಗಲಿ ಎಂದು ಅವರಿಗೆ ಮನೆ ಬಿಟ್ಟುಕೊಟ್ಟಿದ್ದೆ. ಆದರೆ ನಮ್ಮ ನಿರೀಕ್ಷೆ ಹುಸಿಯಾಗಿದೆ. ಅದಕ್ಕೇ ಮಾರಲು ತೀರ್ಮಾನಿಸಿದ್ದೇನೆ ಎಂದು ಸುರೇಶ್ ರಾಯರೆಡ್ಡಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.