ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರಿನಲ್ಲಿ ಯೋಗ ದಿನಾಚರಣೆ ಮುಗಿಸಿ, ಬೆಂಗಳೂರಿನ ತಮ್ಮ ನಿವಾಸಕ್ಕೆ ಆಗಮಿಸಿದಾಗ, ಹಸುಗೂಸನ್ನು ಎತ್ತಿಕೊಂಡು ಕಾಯುತ್ತಿದ್ದ ಶಂಕ್ರಮ್ಮ ಅವರ ಗಮನ ಸೆಳೆದರು.
ಆಕೆಯ ಸಮಸ್ಯೆಯನ್ನು ಕುರಿತು ವಿಚಾರಿಸಿದಾಗ, ಶಂಕ್ರಮ್ಮನ ಮಗು ಕೃಷ್ಣವೇಣಿ, ದೃಷ್ಟಿ ದೋಷ ಹಾಗೂ ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾಗ, ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗುವುದು. ನೆರವು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಶಂಕ್ರಮ್ಮನ ಮನವಿಗೆ ಕೂಡಲೇ ಸ್ಪಂದಿಸಿದ ಮುಖ್ಯಮಂತ್ರಿಗಳು ಮಗು ಕೃಷ್ಣವೇಣಿಯ ಚಿಕಿತ್ಸೆಗೆ ನೆರವು ನೀಡುವ ಭರವಸೆ ನೀಡಿದ್ದಾರೆ. ಇದಾಗಿ ಎರಡು ತಾಸಿನೊಳಗೆ ಮುಖ್ಯಮಂತ್ರಿ ಪರಿಹಾರ ನಿಧಿ ಶಾಖೆಯಿಂದ ಧಾರವಾಡದ ಎಸ್.ಡಿ.ಎಂ. ಆಸ್ಪತ್ರೆಗೆ ಪತ್ರ ಬರೆದು, ಕೃಷ್ಣವೇಣಿಯ ಉಚಿತ ಚಿಕಿತ್ಸೆಗೆ ವ್ಯವಸ್ಥೆ.
ಮಗುವಿಗೆ ಸಂಪೂರ್ಣವಾದ ಚಿಕಿತ್ಸೆ ನೀಡಿದ ನಂತರ ಸರ್ಕಾರಕ್ಕೆ ಬಿಲ್‌ಗಳನ್ನು ಸಲ್ಲಿಸುವಂತೆ ಪತ್ರದಲ್ಲಿ ಎಸ್‌ಡಿಎಂ ಆಸ್ಪತ್ರೆಗೆ ಸೂಚಿಸಲಾಗಿದೆ. ಮಗುವಿನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಮುಖ್ಯಮಂತ್ರಿಗಳ ಮಾತು ಕೆಲವೇ ಗಂಟೆಗಳಲ್ಲಿ ಅಧಿಕೃತ ಭರವಸೆಯಾಗಿದೆ. ಮುಖ್ಯಮಂತ್ರಿಗಳ ಈ ಸ್ಪಂದನೆಗೆ ಮಗುವಿನ ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ.