Publish Date: Tue, 31 May 2022 (11:17 IST)
Updated Date: Tue, 31 May 2022 (10:19 IST)
ಬೆಂಗಳೂರು : ಬಸವರಾಜ ಬೊಮ್ಮಾಯಿಯವರೇ, ನಾನು ಮಾತ್ರವಲ್ಲ ನೀವೂ ದ್ರಾವಿಡರೇ ಆಗಿದ್ದೀರಿ. ಈ ಸ್ಪಷ್ಟತೆ ನನಗಿದೆ.
ನಾನು ದ್ರಾವಿಡ ಮೂಲವನ್ನು ಉಳಿಸಿಕೊಂಡಿದ್ದೇನೆ. ನೀವು ಮಾತ್ರ ಅಧಿಕಾರದ ದುರಾಸೆಯಿಂದ ಮೂಲವನ್ನು ತೊರೆದು ಪಕ್ಷಾಂತರ ಮಾಡಿದ್ದೀರಿ.
ಬೇಗ ಘರ್ ವಾಪಸಿ ಆಗಬಿಡಿ. ಸಿದ್ದರಾಮಯ್ಯ ದ್ರಾವಿಡರೇ? ಆರ್ಯರೇ? ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಶ್ನೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ ಪರಿಯಿದು.
ಬೊಮ್ಮಾಯಿವರೇ, ಭಾರತ-ಚೀನಾ ಗಡಿಪ್ರದೇಶದ ಬೆಳವಣಿಗೆ ಬಗ್ಗೆ ಸರಿಯಾದ ಮಾಹಿತಿ ತರಿಸಿಕೊಳ್ಳಿ. ವರ್ಷದ ಹಿಂದೆ ಚೀನಾ ದೇಶದ ಎದುರು ಭಾರತ ಮಂಡಿ ಊರುವಂತೆ ಮಾಡಿ ಭಾರತೀಯರು ತಲೆ ತಗ್ಗಿಸುವಂತೆ ಮಾಡಿದ್ದು ಯಾರೆಂದು ನಿಮಗೆ ಗೊತ್ತಿಲ್ಲವೇ?
ಭಾರತ ಚೀನಾ ಗಡಿಯನ್ನು ಆ ದೇಶದ ಬೇಡಿಕೆಯಂತೆ 1959ರ ಗಡಿರೇಖೆಗೆ ಒಪ್ಪಿಕೊಂಡು ರಾಜಿ ಮಾಡಿಕೊಂಡಿದ್ದು ಇತ್ತೀಚಿನ ಇತಿಹಾಸ. ಗಾಲ್ವಾನ್ ಕಣಿವೆಯಲ್ಲಿ ನಮ್ಮ ಸೈನಿಕರನ್ನು ಲಾಠಿ, ದೊಣ್ಣೆಗಳಿಂದ ಕಾದಾಡುವಂತೆ ಮಾಡಿದ್ದನ್ನು ಕೂಡಾ ದೇಶದ ಜನ ಮರೆತಿಲ್ಲ ಎಂದು ತಿರುಗೇಟು ನೀಡಿದ್ದಾರೆ.