ಬೆಂಗಳೂರು : ರಾಜ್ಯಸಭಾ ಚುನಾವಣೆ ವೇಳೆ ಜೆಡಿಎಸ್ ಶಾಸಕ ಹೆಚ್ಡಿ ರೇವಣ್ಣ ಅವರ ಮತ ತಿರಸ್ಕೃತವಾಗುತ್ತದೆ ಎಂಬ ಮಾತು ಕೇಳಿ ಬರುತ್ತಿತ್ತು.
ಆದರೆ ಅವರ ಮತ ಸಿಂಧು ಎಂದು ಚುನಾವಣಾ ಅಧಿಕಾರಿ ಅಧಿಕೃತವಾಗಿ ತಿಳಿಸಿದ್ದಾರೆ. ರೇವಣ್ಣ ಮತವನ್ನು ಹಾಕಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಬ್ಯಾಲೆಟ್ ಪೇಪರ್ ತೋರಿಸಿದ್ದರು.
ಜೆಡಿಎಸ್ ಶಾಸಕರಿಗೆ ಮಾತ್ರ ತೋರಿಸಬೇಕಾದ ರೇವಣ್ಣ ಡಿಕೆಶಿಗೆ ತೋರಿಸಿದ್ದಾರೆ ಎಂದು ಬಿಜೆಪಿ ಏಜೆಂಟರು ಕೊಠಡಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ರೇವಣ್ಣ ಅವರ ಮತವನ್ನು ತಿರಸ್ಕೃತಗೊಳಿಸಬೇಕೆಂದು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರು.
ದೂರಿನನ್ವಯ ಚುನಾವಣಾಧಿಕಾರಿಗಳು ಸಿಸಿಟಿವಿ ಫೂಟೇಜ್ ಸೇರಿದಂತೆ ಎಲ್ಲಾ ರೀತಿಯ ಪರಿಶೀಲನೆ ನಡೆಸಿದ್ದಾರೆ. ರೇವಣ್ಣ ಕೇವಲ ಜೆಡಿಎಸ್ ಏಜೆಂಟರಿಗೆ ತೋರಿಸಿ ಮತ ಹಾಕಿದ್ದಾರೆ.
ಕಾಂಗ್ರೆಸ್ ಏಜೆಂಟರಿಗೆ ತೋರಿಸಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲೂ ಮತ ಅಸಿಂಧು ಆಗುವುದಿಲ್ಲ ಎಂದು ಚುನಾವಣಾ ಅಧಿಕಾರಿ ವಿಶಾಲಾಕ್ಷಿ ಆದೇಶ ನೀಡಿದ್ದಾರೆ.