Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ಜೀವನದಲ್ಲಿ ಜಿಗುಪ್ಸೆಗೊಂಡು ಸಾಫ್ಟ್‌ವೇರ್ ಮಹಿಳಾ ಉದ್ಯೋಗಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವೀರಣ್ಣಪಾಳ್ಯದ ನಿವಾಸಿ ಸಂಗೀತಾ (29) ಮೃತ ಯುವತಿ. ಮೃತಳ ಪತಿ ವಿನಯ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮನೆಯಲ್ಲಿ ಗುರುವಾರ ಸಂಜೆ ದಂಪತಿ ಮಧ್ಯೆ ಜಗಳವಾಗಿದೆ. ಆಗ ಬೇಸರಗೊಂಡ ಸಂಗೀತಾ, ತನ್ನ ಕೊಠಡಿಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೆಲ ಹೊತ್ತಿನ ಬಳಿಕ ಆಕೆಯ ಕೋಣೆಗೆ ಪತಿ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದೂವರೆ ವರ್ಷದ ಹಿಂದೆ ಮಂಡ್ಯ ತಾಲೂಕಿನ ಸಂಗೀತಾ ಹಾಗೂ ನಾಗಮಂಗಲದ ವಿನಯ್ ಪ್ರೇಮ ವಿವಾಹವಾಗಿದ್ದು, ದಂಪತಿ ವೀರಣ್ಣಪಾಳ್ಯದಲ್ಲಿ ನೆಲೆಸಿದ್ದರು. ಸಾಫ್ಟ್ವೇರ್ ಕಂಪನಿಯಲ್ಲಿ ಸಂಗೀತಾ ಉದ್ಯೋಗದಲ್ಲಿದ್ದರೆ, ವಿನಯ್ ಸಿವಿಲ್ ಎಂಜಿನಿಯರ್ ಆಗಿದ್ದರು. ಇತ್ತೀಚೆಗೆ ಕೌಟುಂಬಿಕ ವಿಚಾರವಾಗಿ ಸತಿ-ಪತಿ ಮಧ್ಯೆ ಮನಸ್ತಾಪವಾಗಿದ್ದು, ಆಗಾಗ್ಗೆ ಜಗಳವಾಗುತ್ತಿತ್ತು. ಅಂತೆಯೇ ಗುರುವಾರ ಸಂಜೆ 6.30ರ ಸುಮಾರಿಗೆ ಸಂಗೀತಾ ಮತ್ತು ವಿನಯ್ ನಡುವೆ ಜಗಳವಾಗಿದೆ.
ತಮ್ಮ ಮಗಳ ಸಾವಿಗೆ ಅಳಿಯ ವಿನಯ್ ಕಾರಣವಾಗಿದ್ದಾನೆ ಎಂದು ಆರೋಪಿಸಿ ಅಮೃತಹಳ್ಳಿ ಠಾಣೆ ಪೊಲೀಸರಿಗೆ ಮೃತ ಸಂಗೀತಾ ಪೋಷಕರು ದೂರು ನೀಡಿದ್ದಾರೆ. ಅದರನ್ವಯ ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 306) ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.