ಸರ್ವ ದರ್ಶನ ಟೋಕನ್‌ಗಳ ವಿತರಣೆಯನ್ನು ನವೆಂಬರ್ 1ರಿಂದ ಪುನರಾರಂಭಿಸಲು ತಿರುಮಲ ತಿರುಪತಿ ದೇವಸ್ಥಾನ ಸಮಿತಿ ಮಂಡಲಿ ತೀರ್ಮಾನಿಸಿದೆ . ಕಳೆದ ಏಪ್ರಿಲ್ 12ರಿಂದ ಸರ್ವದರ್ಶನ ಟೋಕನ್‌ಗಳ ವಿತರಣೆಯನ್ನು TTD ನಿಲ್ಲಿಸಿತ್ತು. ಇದೀಗ ಮತ್ತೆ ನವೆಂಬರ್ ತಿಂಗಳಿನಿಂದ ದರ್ಶನದ ನಿಯಮಗಳಲ್ಲಿ ಬದಲಾವಣೆ ತರಲು ಮುಂದಾಗಿದೆ. ತಿರುಪತಿಯ ಭೂದೇವಿ ಕಾಂಪ್ಲೆಕ್ಸ್, ಶ್ರೀನಿವಾಸಂ ಮತ್ತು ರೈಲು ನಿಲ್ದಾಣದ ಹಿಂಭಾಗದ ಎರಡನೇ ಚೌಲಿನಲ್ಲಿ ಸರ್ವದರ್ಶನ ಟೋಕನ್ ವಿತರಿಸಲಾಗುತ್ತದೆ. ಪ್ರತಿ ಶನಿವಾರ, ರವಿವಾರ, ಸೋಮವಾರ ಮತ್ತು ಬುಧವಾರದಂದು 20,000ದಿಂದ 25,000 ಟೋಕನ್‌ಗಳನ್ನು ವಿತರಿಸಲಾಗುತ್ತದೆ. ಮಂಗಳವಾರ, ಗುರುವಾರ ಮತ್ತು ಶುಕ್ರವಾರ 15,000 ಟೋಕನ್ ವಿತರಿಸಲಾಗುವುದು ಎಂದು TTD ಇಒ A.V ಧರ್ಮಾರೆಡ್ಡಿ ಮಾಹಿತಿ ನೀಡಿದ್ದಾರೆ. ಇನ್ನು ಉಚಿತ ದರ್ಶನದ ಭಕ್ತರ ಕಾಯುವ ಸಮಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ VIP ದರ್ಶನದ ಸಮಯವನ್ನು ಪ್ರಾಯೋಗಿಕವಾಗಿ ಡಿ.1ರಿಂದ ಬೆಳಗ್ಗೆ 8 ಗಂಟೆಗೆ ಆರಂಭಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.