ನಾಡಿನಾದ್ಯಂತ ಇಂದು ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ ಸಡಗರದಿಂದ ನಡೆದಿದೆ. ಪಾರಂಪರಿಕವಾಗಿ ಈ ಹಬ್ಬದ ಆಚರಣೆ ಮಾಡುವುದು ವಾಡಿಕೆ. ಪ್ರತಿವರ್ಷ ಆಷಾಢ ಮಾಸದಲ್ಲಿ ಬರೋ ಮಣ್ಣೆತ್ತಿನ ಅಮಾವಾಸ್ಯೆ ಕೃಷಿಕರಿಗೆ ಸಂಭ್ರಮದ ಹಬ್ಬಗಳಲ್ಲೊಂದು. ಉತ್ತರ ಕರ್ನಾಟಕದಲ್ಲಿ ಅದ್ರಲ್ಲೂ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಪ್ರತಿ ಹಳ್ಳಿಯಲ್ಲೂ ಮಣ್ಣೆತ್ತಿನ ಅಮಾವಾಸ್ಯೆಯನ್ನು ವಿಶಿಷ್ಟವಾಗಿ ಆಚರಿಸುತ್ತಾರೆ.
ಬೆಳಿಗ್ಗೆ ಕುಟುಂಬ- ಪರಿವಾರ ಸಮೇತ, ಹೊಸ ಬಟ್ಟೆಗಳನ್ನು ಧರಿಸಿದ ಜನರು ದೇವಸ್ಥಾನಗಳಿಗೆ ತೆರಳಿ ಮಣ್ಣೆತ್ತಿನ ಪೂಜೆ ಮಾಡಿದ್ರು. ಎತ್ತು ಕೃಷಿಕರಿಗೆ ಆರಾಧ್ಯ ದೈವ. ಪ್ರತಿ ವರ್ಷ ಮುಂಗಾರಿನಲ್ಲಿ ಬರೋ ಅಮಾವಾಸ್ಯೆ ದಿನ ಎತ್ತುಗಳನ್ನು ಪೂಜೆ ಮಾಡುವುದರಿಂದ ಈಶ್ವರ ತೃಪ್ತನಾಗುತ್ತಾನೆ. ಮಳೆ-ಬೆಳೆ ಚೆನ್ನಾಗಿರುತ್ತದೆ.
ಬಿತ್ತನೆಗೆ ಮತ್ತು ಕೃಷಿಗೆ ಜೀವನಾಧಾರವಾಗಿರುವ ಎತ್ತುಗಳನ್ನು ಮಣ್ಣಿನಲ್ಲಿ ತಯಾರಿಸಿ ಪೂಜಿಸುವುದರಿಂದ ಕೃಷಿಕನ ಬಾಳು ಹಸನಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ, ರಾಜ್ಯದಾದ್ಯಂತ ಕೃಷಿಕ ಕುಟುಂಬದವರು ಮಣ್ಣೆತ್ತಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ಸಲ್ಲಿಸಿದ್ರು. ಕೆಲವರು ತಮ್ಮ ತಮ್ಮ ಮನೆಗಳಲ್ಲಿ ಮಣ್ಣಿನ ಎತ್ತುಗಳಿಗೆ ಪೂಜೆ ಸಲ್ಲಿಸಿದರು.