ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಧ್ಯಸ್ಥಿಕೆಯಲ್ಲಿ ನಡೆದ ಉಭಯ ರಾಜ್ಯಗಳ ಸಂಧಾನ ವಿಫಲವಾಗಿದೆ.
ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾಭಾರತಿ ನೇತೃತ್ವದಲ್ಲಿ ದೆಹಲಿಯ ಶ್ರಮಶಕ್ತಿ ಭವನದಲ್ಲಿ ನಡೆದ ಕಾವೇರಿ ಬಿಕ್ಕಟ್ಟಿನ ಸಂಧಾನ ಸಭೆ ನಿರೀಕ್ಷೆಯಂತೆಯೇ ವಿಫಲವಾಗಿದೆ.
ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ತಮಿಳುನಾಡು ಪಟ್ಟು ಹಿಡಿದಿದ್ದು, ಉಭಯ ರಾಜ್ಯಗಳಲ್ಲಿ ನೀರಿನ ಲಭ್ಯತೆ ಕುರಿತು ಪರಿಶೀಲನೆ ನಡೆಸಲು ತಜ್ಞರ ತಂಡ ರಚಿಸಲು ಕರ್ನಾಟಕ ಪಟ್ಟು ಹಿಡಿದಿದೆ. ಹೀಗಾಗಿ ಸಭೆಯಲ್ಲಿ ಉಭಯ ರಾಜ್ಯಗಳ ಜನಪ್ರತಿನಿಧಿಗಳ ಹಗ್ಗ ಜಗ್ಗಾಟ ನಡೆದ ಕಾರಣವಾಗಿ ಉಭಯ ರಾಜ್ಯಗಳ ನಡುವಿನ ಸಂಧಾನ ಸಭೆ ಮುರಿದು ಬಿದ್ದಿದೆ.
ಉಭಯ ರಾಜ್ಯಗಳ ನಡುವಿನ ಸಂಧಾನ ಸಭೆ ವಿಫಲವಾದ ಹಿನ್ನೆಲೆಯಲ್ಲಿ ವಿವಾದದ ಕುರಿತು ಕೇಂದ್ರ ಸರಕಾರ ಯಾವುದೇ ನಿರ್ಣಯವನ್ನು ತಿಳಿಸಿಲ್ಲ.
ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾಭಾರತಿ ಅವರು, ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಉಭಯ ರಾಜ್ಯಗಳ ಅಧಿಕಾರಿಗಳೊಂದಿಗೆ ಸಂಧಾನ ಸಭೆ ನಡೆಸಿದ್ದೇನೆ. ಕರ್ನಾಟಕದ ಪ್ರತಿನಿಧಿಗಳು ತಜ್ಞರ ತಂಡ ರಚನೆ ಮಾಡಿ ಉಭಯ ರಾಜ್ಯಗಳಲ್ಲಿರು ನೀರಿನ ಲಭ್ಯತೆ ಕುರಿತು ಪರಿಶೀಲನೆ ನಡೆಸುವಂತೆ ಕೋರಿದೆ. ಆದರೆ, ಕರ್ನಾಟಕದ ಸಲಹೆಗೆ ತಮಿಳುನಾಡು ಒಪ್ಪುತ್ತಿಲ್ಲ. ಕೋರ್ಟ್‌ನ ಹೊರಗಡೆ ಸಂಧಾನ ಸಭೆ ನಡೆಸಿದ್ದೇವೆ ಎಂದು ಹೇಳಿದರು. ಇಂದು ನಡೆದ ಸಭೆ ಕುರಿತು ಕೇಂದ್ರದ ನಿರ್ಣಯವನ್ನು ನಾಳೆ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ