ಪ್ರತೀಕಾರದ ಕ್ರಮವಾಗಿ ಸುಮಾರು 250 ನಾಯಿಗಳನ್ನು ಕೊಂದ ಎರಡು ಮಂಗಗಳನ್ನು ಸೆರೆಹಿಡಿದ ಸ್ವಾರಸ್ಯಕರ ಘಟನೆ ಮಹಾರಾಷ್ಟ್ರದ ಗ್ರಾಮವೊಂದರಿಂದ ವರದಿಯಾಗಿದೆ.
ಈ ಪ್ರದೇಶದಲ್ಲಿ ಮಂಗನ ಮರಿಯೊಂದನ್ನು ನಾಯಿಗಳು ಕೊಂದಿದ್ದಕ್ಕೆ ಪ್ರತೀಕಾರವಾಗಿ ಈ ಎರಡು ಮಂಗಗಳು 250 ಶ್ವಾನಗಳನ್ನು ಕೊಂದಿವೆ ಎಂದು ಎಎನ್‌ಐ ವರದಿ ಮಾಡಿದೆ.
"ಹಲವು ನಾಯಿ ಹಾಗೂ ನಾಯಿ ಮರಿಗಳನ್ನು ಕೊಂದ ಎರಡು ಮಂಗಗಳನ್ನು ನಾಗ್ಪುರ ಅರಣ್ಯ ಇಲಾಖೆಯ ತಂಡ ಬೀಡ್‌ನಲ್ಲಿ ಬಂಧಿಸಿದೆ" ಎಂದು ಅರಣ್ಯಾಧಿಕಾರಿ ಸಚಿನ್ ಕಂದ್ ಹೇಳಿದ್ದಾರೆ. ಮಂಗಗಳನ್ನು ನಾಗ್ಪುರಕ್ಕೆ ಸ್ಥಳಾಂತರಿಸಲಾಗಿದ್ದು, ಪಕ್ಕದ ಅರಣ್ಯಕ್ಕೆ ಬಿಡಲಾಗುವುದು ಎಂದು ಹೇಳಿದ್ದಾರೆ.
ಲಾವೂಲ್ ಎಂಬ ಗ್ರಾಮದಲ್ಲಿ ಹಲವು ತಿಂಗಳುಗಳಿಂದ ನಾಯಿ ಮರಿಗಳನ್ನು ಮಂಗಗಳು ಸಾಯಿಸುತ್ತಿರುವ ಬಗ್ಗೆ ಗ್ರಾಮಸ್ಥರು ದೂರು ನೀಡಿದ್ದರು. ನಾಯಿ ಮರಿಗಳನ್ನು ಕಂಡ ತಕ್ಷಣ ಈ ಮಂಗಗಳು ಎತ್ತರದ ಪ್ರದೇಶಕ್ಕೆ ಎತ್ತಿಕೊಂಡು ಹೋಗುತ್ತಿದ್ದವು. ಬಳಿಕ ಅಲ್ಲಿಂದ ಕೆಳಕ್ಕೆ ಎಸೆದು ಸಾಯಿಸುತ್ತಿದ್ದವು ಎಂದು ಹೇಳಲಾಗಿದೆ.
ಗ್ರಾಮಸ್ಥರು ದರೂರ್ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ, ಶಾಲೆಗೆ ಹೋಗುವ ಕೆಲ ಮಕ್ಕಳಿಗೂ ತೊಂದರೆ ಕೊಡುತ್ತಿದೆ. ಇಡೀ ಗ್ರಾಮದಲ್ಲಿ ಆತಂಕ ಸೃಷ್ಟಿಯಾಗಿದೆ ಎಂದು ದೂರು ನೀಡಿದ್ದರು. ಈ ಘಟನೆ ಗ್ರಾಮಸ್ಥರು ಹಾಗೂ ಅಧಿಕಾರಿಗಳಲ್ಲಿ ಸಂಚಲನ ಮೂಡಿಸಿದ್ದು ಮಾತ್ರವಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ಸಂಚಲನ ಮೂಡಿಸಿದೆ