Select Your Language

Notifications

webdunia
webdunia
webdunia
webdunia

ಪರಿಶಿಷ್ಠ ಜಾತಿಗಳಿಗೆ ಸಿಎಂ ಸಿದ್ದರಾಮಯ್ಯ ಬೆನ್ನಿಗೆ ಚೂರಿ ಹಾಕಿದ್ರು: ಬಿವೈ ವಿಜಯೇಂದ್ರ

BY Vijayendra
ಬೆಂಗಳೂರು: ಕರ್ನಾಟಕದ ಪರಿಶಿಷ್ಠ ಜಾತಿಗಳಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

‘ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಐತಿಹಾಸಿಕ ಮೋಸ ಮತ್ತು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದೆ. ಸುಪ್ರಿಂಕೋರ್ಟ್ ಆದೇಶದ ಅನುಸಾರ ಪರಿಶಿಷ್ಟ ಜಾತಿಗಳಿಗೆ ಮೀಸಲಾತಿ ಹಂಚಿಕೆ ಮಾಡಲು ಸರಿಸುಮಾರು ಎರಡೂವರೆ ವರ್ಷಗಳವರೆಗೆ ಕಾಲಹರಣ ಮಾಡಿ ಅಂತಿಮವಾಗಿ ಸಚಿವ ಸಂಪುಟ ಸಭೆಯಲ್ಲಿ ಎ, ಬಿ, ಮತ್ತು ಸಿ ವರ್ಗಗಳಾಗಿ ವಿಂಗಡಿಸಿದೆ.

 
ಹಿಂದಿನ ಬಿಜೆಪಿ ಸರ್ಕಾರವು ಪರಿಶಿಷ್ಟ ಜಾತಿಗಳಿಗೆ ಶೇ.15 ರಿಂದ ಶೇ.17ಕ್ಕೆ ಮೀಸಲಾತಿಯನ್ನು ಹೆಚ್ಚಿಸಿತ್ತು. ಆದರೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ‘ಎ’ ವರ್ಗಕ್ಕೆ ಬಿಜೆಪಿ ಸರ್ಕಾರವು ನೀಡಿದ್ದ ಶೇ. 6ರ ಪ್ರಮಾಣವನ್ನುತಗ್ಗಿಸಿ ಶೇ. 5.25ಕ್ಕೆ  ಹಾಗೂ ‘ಬಿ’ ವರ್ಗಕ್ಕೆ ನೀಡಲಾಗಿದ್ದ ಶೇ. 5.5 ಪ್ರಮಾಣವನ್ನು ತಗ್ಗಿಸಿ ಶೇ. 5.25ಕ್ಕೆ ಇಳಿಸುವ ಮೂಲಕ ಎಡ ಮತ್ತು ಬಲ ಸಮುದಾಯಗಳಿಗೆ ಘೋರ ಅನ್ಯಾಯವನ್ನು ಎಸಗಿದೆ. ಅದೇ ರೀತಿ ಬಂಜಾರ, ಭೋವಿ, ಕೊರಚ ಹಾಗೂ ಕೊರಮ ಸಮುದಾಯಗಳಿಗೆ ನೀಡಲಾಗಿದ್ದ ಶೇ. 4.5ರ ಪ್ರಮಾಣವನ್ನು ಹಾಗೂ ಪ್ರತ್ಯೇಕವಾಗಿ ಅಲೆಮಾರಿ ಸಮುದಾಯಗಳಿಗೆ ನೀಡಲಾಗಿದ್ದ ಶೇ. 1 ಪ್ರಮಾಣವನ್ನು ರದ್ದುಗೊಳಿಸಿ ಇವೆರಡೂ ಸಮುದಾಯವನ್ನು ಒಟ್ಟುಗೂಡಿಸಿ ‘ಸಿ’ ವರ್ಗವನ್ನಾಗಿಸಿ ನ್ಯಾಯಯುತವಾಗಿ ಬರಬೇಕಾಗಿದ್ದ ಶೇ. 5.5ರ ಪ್ರಮಾಣವನ್ನು ತಗ್ಗಿಸಿ ಶೇ. 4.5ಕ್ಕೆ ಇಳಿಸಿದೆ. ಆ ಮೂಲಕ ಈ ಸಮುದಾಯಗಳ ಬೆನ್ನಿಗೂ ಚೂರಿಯನ್ನು ಹಾಕಿದೆ.

ನ್ಯಾಯಾಲಯದಲ್ಲಿ ತಡೆಯಾಜ್ಞೆ ಇಲ್ಲದಿದ್ದರೂ ರಾಜ್ಯ ಸರ್ಕಾರವೇ ಅಫಿಡವಿಟ್ ಸಲ್ಲಿಸಿ ಶೇ. 17ರ ಮೀಸಲಾತಿಯನ್ನು ಶೇ. 15ಕ್ಕೆ ಇಳಿಸುವುದಾಗಿ ಒಪ್ಪಿಕೊಂಡಿದ್ದರ ಫಲ ಪ.ಜಾ.ಮೀಸಲಾತಿ ಪ್ರಮಾಣವು 17 ರಿಂದ 15ಕ್ಕೆ ಇಳಿಯಲು ಕಾರಣವಾಗಿದೆ.

ಒಂದೆಡೆ ಲಕ್ಷಾಂತರ ಸರಕಾರಿ ಹುದ್ದೆಗಳು ಖಾಲಿ ಇದ್ದರೂ ಯಾವುದನ್ನೂ ಭರ್ತಿ ಮಾಡದೇ ಒಳಮೀಸಲಾತಿ ಹೆಸರಲ್ಲಿ ಎರಡೂವರೆ ವರ್ಷಗಳ ಅಮೂಲ್ಯ ಸಮಯವನ್ನು ಹಾಳು ಮಾಡಿದ ಕಾಂಗ್ರೆಸ್ ಸರಕಾರ, ಇನ್ನೇನು ತನ್ನ ಅಧಿಕಾರವಧಿ ಕೇವಲ 2 ವರ್ಷ ಉಳಿದಿರುವಾಗ ಪರಿಶಿಷ್ಟ ಸಮುದಾಯಗಳೂ ಸೇರಿದಂತೆ ಇಡೀ ರಾಜ್ಯದ ಜನರ ಕಣ್ಣಿಗೆ ಮಣ್ಣೆರಚುವ ರೀತಿಯಲ್ಲಿ ನೇಮಕಾತಿಗೆ ಚಾಲನೆ ಕೊಡುವುದಾಗಿ ಸಮಜಾಯಿಷಿ ನೀಡಿದೆ.

ಆದರೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕರ್ನಾಟಕದ ಪರಿಶಿಷ್ಟ ಸಮುದಾಯಗಳಿಗೆ ಮಾಡಿರುವ ಅನ್ಯಾಯಕ್ಕೆ ಭವಿಷ್ಯದಲ್ಲಿ ಬೆಲೆ ತೆತ್ತಲೇ ಬೇಕಾಗುತ್ತದೆ ಎಂಬುದನ್ನು ಮರೆಯಬಾರದು. ಈಗಲೂ ಕಾಂಗ್ರೆಸ್ ಪಕ್ಷಕ್ಕೆ ಪರಿಶಿಷ್ಟರ ಬಗ್ಗೆ ಬದ್ಧತೆ ಇದ್ದರೆ ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಜಾರಿಗೊಳಿಸಿದ್ದ ಶೇ.17ರ ಮೀಸಲಾತಿ ಪ್ರಮಾಣವನ್ನು ಉಳಿಸಿಕೊಳ್ಳಲು ರಾಜ್ಯ ಸರಕಾರ ಸೂಕ್ತ ಕಾನೂನು ಹೋರಾಟ ನಡೆಸುವುದು ಒಳಿತು. ಇಲ್ಲವಾದರೆ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಧೂಳೀಪಟವಾಗುವ ಕಾಲ ಸನ್ನಿಹಿತವಾಗಿದೆ ಎಂಬುದನ್ನು ಒಪ್ಪಿಕೊಳ್ಳದೇ ವಿಧಿ ಇಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೈವದ ಭಂಡಾರ ಕೊಂಡೊಯ್ಯುವಾಗ ಸಂಕ ಮುರಿದು ಬಿದ್ದು 8 ಮಂದಿಗೆ ಗಾಯ Video