Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಸಿಂದಗಿ : ಜನರ ಆಕ್ರೋಶ ವ್ಯಕ್ತತೆಗೆ ಉಪ ಚುನಾವಣೆ ಅವಕಾಶ ನೀಡಿದ್ದು, ಚುನಾವಣೆ ರಾಜ್ಯ ಸರ್ಕಾರದ ವೈಫಲ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸಿಂದಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, 'ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರ ಇಂದಿನಿಂದ ಆರಂಭವಾಗಿದೆ. ಮನಗೂಳಿ ಅವರನ್ನು ಭಗವಂತ ಕರೆಸಿಕೊಂಡ ಹಿನ್ನೆಲೆಯಲ್ಲಿ ಈ ಚುನಾವಣೆ ನಡೆಯುತ್ತಿದೆ. ನಾವೆಲ್ಲ ಸೇರಿ ಮನಗೂಳಿ ಅವರ ಪುತ್ರನಿಗೆ ಟಿಕೆಟ್ ನೀಡಿದ್ದೇವೆ. ಮನಗೂಳಿ ಅವರು ಕೊನೆಯುಸಿರು ಎಳೆಯುವುದಕ್ಕೂ 15 ದಿನಗಳ ಮುನ್ನ ನನ್ನನ್ನು ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನನ್ನ ಮಗನನ್ನು ನಿಮ್ಮ ಕೈಲಿಡುತ್ತಿದ್ದೇನೆ ಎಂದಿದ್ದರು. ಅವರು ನನಗೆ ಆತ್ಮೀಯರಾಗಿದ್ದರು. ಅವರು ಗೌರವಯುತ ಹಾಗೂ ಸಜ್ಜನಿಕೆಯಿಂದ ನಡೆದುಕೊಳ್ಳುತ್ತಿದ್ದರು. ನಾವೆಲ್ಲ ಸೇರಿ ಅವರಿಗೆ ಕೊಟ್ಟ ಮಾತಿನಂತೆ ಒಮ್ಮತದಿಂದ ಅಶೋಕ್ ಮನಗೂಳಿ ಅವರನ್ನು ಕಣಕ್ಕಿಳಿಸಿದ್ದೇವೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.