ಬಳ್ಳಾರಿ : ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಲ್ಲಿ ಡಬಲ್ ಎಂಜಿನ್ ಸರ್ಕಾರಕ್ಕೆ ಕೇವಲ ಮೂರೂವರೆ ವರ್ಷ ಆಡಳಿತ ಮಾಡುವ ಅವಕಾಶ ಸಿಕ್ಕಿದೆ. ಆದರೆ ಕಾಂಗ್ರೆಸ್ ಸರ್ಕಾರ ಇದ್ದಾಗ ಅಭಿವೃದ್ಧಿ ಬದಲಾಗಿ ಭ್ರಷ್ಟಾಚಾರಕ್ಕೆ ಆದ್ಯತೆ ನೀಡಿತ್ತು ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಕರ್ನಾಟಕ ಚುನಾವಣೆ ಹಿನ್ನಲೆಯಲ್ಲಿ ಬಳ್ಳಾರಿಯಲ್ಲಿ ಬಿಜೆಪಿ ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡು ಮೋದಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಇದ್ದಾಗ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ನೀಡದೆ ಭ್ರಷ್ಟಾಚಾರಕ್ಕೆ ಪ್ರಾಮುಖ್ಯತೆ ಕೊಟ್ಟಿತ್ತು. ಇದಕ್ಕೆ ಕಾರಣವೇನು? ಕಾಂಗ್ರೆಸ್ನ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೇ ತಮ್ಮ ಸರ್ಕಾರ ದೆಹಲಿಯಿಂದ 100 ಪೈಸೆ ಕಳುಹಿಸಿದೆ, ಬಡವರಿಗೆ ತಲುಪಿದ್ದು ಕೇವಲ 15 ಪೈಸೆ ಎಂದು ಹೇಳಿದ್ದಾರೆ. ಒಂದು ರೀತಿಯಲ್ಲಿ ಕಾಂಗ್ರೆಸ್ 85% ಕಮಿಷನ್ ಪಡೆದ ಪಕ್ಷ ಎಂದು ಅವರೇ ಒಪ್ಪಿಕೊಂಡಿದ್ದರು ಎಂದು ಟೀಕಿಸಿದರು.
ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ದೇಶದ ವ್ಯವಸ್ಥೆ ಹಾಗೂ ರಾಜಕೀಯವನ್ನು ಭ್ರಷ್ಟಗೊಳಿಸುವ ಕೆಲಸ ಮಾಡಿದೆ. ಕಳೆದ ಕೆಲವು ವರ್ಷಗಳಲ್ಲಿ, ಕಾಂಗ್ರೆಸ್ ಭಾರತದ ರಾಜಕೀಯದಲ್ಲಿ ಮತ್ತೊಂದು ರೋಗವನ್ನು ಸೃಷ್ಟಿಸಿದೆ. ಚುನಾವಣೆ ಗೆಲ್ಲಲು ಕಾಂಗ್ರೆಸ್ ಹಣದ ಹೊಳೆ ಹರಿಸಿದೆ. ಹಣ ಹಂಚಿ ಚುನಾವಣೆ ಗೆದ್ದಿದೆ. ಕಾಂಗ್ರೆಸ್ ಸುಳ್ಳು ಸರ್ವೇ ಮಾಡಿಸಿದೆ. ಈ ಮೂಲಕ ಕಾಂಗ್ರೆಸ್ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.