ಬೆಂಗಳೂರು: ನಗರದ ಪ್ರಮುಖ ಹೋಟೆಲ್ ತಾಜ್ ವೆಸ್ಟ್ ಎಂಡ್‌ಗೆ ಇ ಮೇಲ್ ಮೂಲಕ ಇಂದು ಬಾಂಬ್ ಬೆದರಿಕೆ ಒಡ್ಡಲಾಗಿದೆ. ಅಪರಿಚಿತ ದುಷ್ಕರ್ಮಿಗಳು ಸಂದೇಶ ಕಳುಹಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ನಗರದ ಹಲವು ಖಾಸಗಿ ಶಾಲೆಗಳಿಗೆ ಈ ಹಿಂದೆ ಬಾಂಬ್ ಬೆದರಿಕೆ ಕರೆಗಳು ಬಂದಿದ್ದವು. ಇದೀಗ ನಗರದ ಪ್ರತಿಷ್ಠಿತ ತಾಜ್ ವೆಸ್ಟ್ ಎಂಡ್ ಹೊಟೇಲ್ ಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಹೊಟೇಲ್ ನಲ್ಲಿ ಬಾಂಬ್ ಇಟ್ಟು ಸ್ಪೋಟಿಸುವುದಾಗಿ ಕಿಡಿಗೇಡಿಗಳು ಇ-ಮೇಲ್ ಮಾಡಿದ್ದಾರೆ.
ಇದು ಗಮನಕ್ಕೆ ಬಂದ ಕೂಡಲೇ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಪೊಲೀಸರು, ಬಾಂಬ್ ಸ್ಕ್ವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಅದೊಂದು ಹುಸಿ ಬಾಂಬ್ ಬೆದರಿಕೆ ಎಂದು ದೃಢವಾಗಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಗರದ ಖ್ಯಾತ ಪಂಚತಾರಾ ಹೊಟೇಲ್ ಗಳಲ್ಲಿ ತಾಜ್ ವೆಸ್ಟ್ ಎಂಡ್ ಪ್ರಮುಖವಾಗಿದ್ದು, ಇಲ್ಲಿ ರಾಜಕಾರಣಿಗಳು, ಕ್ರಿಕೆಟರ್ಗಳು, ಉದ್ಯಮಿಗಳು ಆಗಾಗ ವಾಸ್ತವ್ಯ ಹೂಡುತ್ತಾರೆ. ಘಟನೆ ಬಗ್ಗೆ ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.