ದಕ್ಷಿಣ ಕನ್ನಡ ಜಿಲ್ಲಾ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಅವರ ಹತ್ಯೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಮತ್ತು ಹಿಂದುಪರ ಸಂಘಟನೆಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿವೆ. ಪ್ರವೀಣ್‌ರ ಮೃತದೇಹವನ್ನು ಆಸ್ಪತ್ರೆಯಿಂದ ಬೆಳ್ಳಾರೆಗೆ ತರಲಾಯಿತು, ಅಂತಿಮ ದರ್ಶನ ಪಡೆಯಲು ಜನಸ್ತೋಮವೇ ಸೇರಿದೆ.
ಕೊಲೆಗಾರರಿಗೆ ಕಠಿಣ ಶಿಕ್ಷೆಯಾಗಬೇಕು ಎಂಬ ಆಗ್ರಹ ದಟ್ಟವಾಗಿದೆ. ಮೃತದೇಹದ ಅಂತಿಮ ದರ್ಶನ ಪಡೆಯಲು ಸಚಿವ ಸುನೀಲ್ ಕುಮಾರ್ ಜತೆ ಬೆಳ್ಳಾರೆಗೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರಿಗೆ ಪ್ರತಿಭಟನೆಯ ಬಿಸಿ ತಟ್ಟಿದೆ.
ಬಿಜೆಪಿ ಅಧ್ಯಕ್ಷರನ್ನು ಮುತ್ತಿದೆ ಹಾಕಿದ ಕಾರ್ಯಕರ್ತರು, ರಾಜ್ಯದಲ್ಲಿ ಬಿಜೆಪಿ ಸರ್ಕಾವಿದ್ದರೂ ಅಪರಾಧಿಗಳ ಬಂಧನ ಆಗುತ್ತಿಲ್ಲ. ಇನ್ನೆಷ್ಟು ಕಾರ್ಯಕರ್ತರ ಹತ್ಯೆ ಆಗಬೇಕು? ಎಂದು ಆಕ್ರೋಶ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯಾಧ್ಯಕ್ಷರು ಮತ್ತು ಸಚಿವರು ಸುಮಾರು ಅರ್ಧಗಂಟೆ ಕಾರಿನಲ್ಲೇ ಕುಳಿತಿದ್ದರು. ಈ ವೇಳೆ ರಾಜ್ಯಾಧ್ಯಕ್ಷರ ಕಾರಿನ ಟೈಯರ್ ಪಂಕ್ಚರ್ ಆಗಿತ್ತು. ಕಾರ್ಯಕರ್ತರು ಕಾರನ್ನೇ ಮಗುಚಿ ಹಾಕಲು ಮುಂದಾದರು. ಎಚ್ಚೆತ್ತುಕೊಂಡ ಪೊಲೀಸರು ಲಾಠಿ ಪ್ರಹಾರ ಮಾಡಿ ಗುಂಪು ಚದುರಿಸಿದರು. ಈ ವೇಳೆ ಓರ್ವ ಕಾರ್ಯಕರ್ತನಿಗೆ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಪರಿಸ್ಥಿತಿಯಿಂದ ಗಲಿಬಿಲಿಗೊಂಡ ಬಿಜೆಪಿ ರಾಜ್ಯಾಧ್ಯಕ್ಷರು ಅಲ್ಲಿಂದ ತೆರಳಿದ್ದಾಗಿ ಪ್ರತ್ಯಕ್ಷದರ್ಶಿಗಳು. ಇನ್ನೊಂದೆಡೆ, ಮೃತದೇಹದ ಅಂತಿಮ ದರ್ಶನಕ್ಕೆ ಬಂದಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರನ್ನು ಭೇಟಿ ಮಾಡಿದ ಕಾರ್ಯಕರ್ತರು, ನಿಮ್ಮ ಮೇಲೆ ನಮಗೆ ವಿಶ್ವಾಸವಿದೆ. ನೀವೇ ಮುಂದಾಳತ್ವ ವಹಿಸಿ ನಮಗೆ ನ್ಯಾಯ ಕೊಡಿಸಬೇಕು ಎಂದು ಕೋರಿದ್ದಾರೆ.