ಬೆಂಗಳೂರು: ಗುಲ್ಬರ್ಗ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಿ ಅಭೂತಪೂರ್ವ ಗೆಲುವನ್ನು ಪಡೆದ ಉಮೇಶ್ ಜಾಧವ್ ಅವರು ಮತ್ತೆ ಸ್ಪರ್ಧಿಸುತ್ತಿದ್ದಾರೆ. ಗುಲ್ಬರ್ಗ ಕ್ಷೇತ್ರ ಸೇರಿ 28ಕ್ಕೆ 28 ಕ್ಷೇತ್ರಗಳಲ್ಲಿ ಬಿಜೆಪಿ- ಜೆಡಿಎಸ್ ಗೆಲುವು ಸಾಧಿಸುವ ಗುರಿ ನಮ್ಮದು; ಅದು ಈಡೇರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಅಫಜಲಪುರದ ಮುಖಂಡ ನಿತಿನ್ ಗುತ್ತೇದಾರ್, ಬೆಂಬಲಿಗರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಕಳೆದ 10 ವರ್ಷಗಳಲ್ಲಿ ನುಡಿದಂತೆ ನಡೆದವರು. ಪ್ರಣಾಳಿಕೆಯಲ್ಲಿ ಘೋಷಿಸಿದ ವಿಚಾರಗಳನ್ನು ಅಕ್ಷರಶಃ ಅನುಷ್ಠಾನಕ್ಕೆ ತಂದಿದ್ದೇವೆ ಎಂದು ವಿವರಿಸಿದರು.
ನರೇಂದ್ರ ಮೋದಿಯವರ 10 ವರ್ಷಗಳ ಆಡಳಿತದ ಬಳಿಕವೂ ಅವರ ಜನಪ್ರಿಯತೆ ವೃದ್ಧಿಯಾಗುತ್ತಿದೆ. ಮೋದಿ ಮತ್ತೊಮ್ಮೆ ಎಂಬ ಸಂಕಲ್ಪದೊಂದಿಗೆ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಮೋದಿಯವರು ಒಂದು ದಿನವೂ ವಿಶ್ರಾಂತಿರಹಿತವಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ತಾಯಿಯ ಅಂತ್ಯಸಂಸ್ಕಾರಕ್ಕೆ ಕೇವಲ 2 ಗಂಟೆ ಕಾಲ ತೆರಳುತ್ತಾರೆ. ಅಂಥ ವಿಶಿಷ್ಟ ಶಕ್ತಿ ಅವರು ಎಂದು ವಿಶ್ಲೇಷಿಸಿದರು.
ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪ ಮೋದಿಯವರದು ಎಂದರಲ್ಲದೆ, ನಿತಿನ್ ಗುತ್ತೇದಾರರಿಗೆ ಮತ್ತು ಅವರ ಬೆಂಬಲಿಗರಿಗೆ ಗೌರವ ಕೊಟ್ಟು ಕೆಲಸ ಮಾಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ನಿತಿನ್ ಗುತ್ತೇದಾರ್ ಅವರನ್ನು ಬಿಜೆಪಿಗೆ ಆತ್ಮೀಯವಾಗಿ ಬರಮಾಡಿಕೊಳ್ಳುತ್ತೇನೆ. ಅವರ ಸೇರ್ಪಡೆಯಿಂದ ಗುಲ್ಬರ್ಗ ಲೋಕಸಭಾ ಕ್ಷೇತ್ರದಲ್ಲಿ ಒಂದು ಭಾರಿ ಪರಿಣಾಮ ಬೀರಲಿದೆ. ಅವರ ಸೇರ್ಪಡೆಯು ಪಕ್ಷಕ್ಕೆ ಒಂದು ದೊಡ್ಡ ಶಕ್ತಿಯನ್ನು ತಂದು ಕೊಟ್ಟಿದೆ ಎಂದು ನುಡಿದರು.