ಬೆಂಗಳೂರು: ವೈಚಾರಿಕ ವಿಚಾರಗಳು ಯಾವುವೇ ಆದರೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ವಿಚಾರ ಅತ್ಯಂತ ಖಂಡನೀಯ. ಈ ಸಾವಿನಲ್ಲಿ ರಾಜಕಾರಣ ಸರಿಯಲ್ಲ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಹೇಳಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹತ್ಯೆ ಪ್ರಕರಣವನ್ನು ಎಸ್ಐಟಿ ತನಿಖೆಗೆ ನೀಡಿದೆ. ಇದು ಸಿಐಡಿಯ ಒಂದು ಭಾಗ. ಹೀಗಾಗಿ ಸತ್ಯ ಹೊರಬರುವುದಿಲ್ಲ. ಹೀಗಾಗಿ ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಈ ಘಟನೆಯಲ್ಲಿ ಯಾರ ಕೈವಾಡವಿದೆಯೆಂಬುದು ತಿಳಿದಿಲ್ಲ. ರಾಜ್ಯದವರು ಮಾಡಿದ್ದಾರಾ, ಇಲ್ಲ ಹೊರರಾಜ್ಯದವರ ಕೈವಾಡವಿದೆಯೋ ತಿಳಿದಿಲ್ಲ. ಎಂ.ಎಂ.ಕಲಬುರ್ಗಿ ಹತ್ಯೆಯಾಗಿ ಎರಡು ವರ್ಷವಾಗಿದೆ. ಆದರೂ ಆರೋಪಿಗಳ ಸುಳಿವಿಲ್ಲ. ಈಗಾಗಲೇ ಹಲವು ಮುಖಂಡರ ಹತ್ಯೆಗಳಾಗಿವೆ. ಸರ್ಕಾರ ಇದಕ್ಕೆ ತಾರ್ಕಿಕ ಅಂತ್ಯ ನೀಡಿಲ್ಲ. ಗೌರಿ ಲಂಕೇಶ್ ಹತ್ಯೆ ಮಾಡಿದವರು ಯಾರೇ ಆಗಲಿ, ಎಷ್ಟೇ ದೊಡ್ಡವರಾದವರಾದರೂ ಆದರು ಸರಿ. ಅವರನ್ನ ಕೂಡಲೇ ಬಂಧಿಸಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯ ಗುಪ್ತಚರ ಇಲಾಖೆ ತಂಡ ಉತ್ತಮವಾಗಿದೆ. ಅವರಿಗೆ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡಬೇಕು. ಆ ಕೆಲಸವನ್ನ ಗೃಹ ಸಚಿವರು ಮಾಡಬೇಕು. ಗುಪ್ತಚರ ಇಲಾಖೆ ವೈಫಲ್ಯವಾಗಿಲ್ಲ ಎಂದರು.
ಇನ್ನು ಮಂಗಳೂರು ಚಲೋ ಬಗ್ಗೆ ಮಾತನಾಡಿ, ಸೆ. 7ರಂದು ನಮ್ಮ ಮಂಗಳೂರು ಚಲೋ ನಡೆಯಲಿದೆ. ಯಾವುದೇ ಕಾರಣಕ್ಕೂ ನಿಲ್ಲಲ್ಲ. ಯಡಿಯೂರಪ್ಪ ಕೂಡ ಇದರಲ್ಲಿ ಭಾಗಿಯಾಗಲಿದ್ದಾರೆ ಎಂದು ಆರ್.ಅಶೋಕ್ ಸ್ಪಷ್ಟನೆ ನೀಡಿದರು.