ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ವಿಚಾರಣೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆ.13ರಿಂದ ಮತ್ತೆ ಆರಂಭಗೊಳ್ಳಲಿದೆ.
ಪ್ರಕರಣದ ವಿಚಾರಣೆ ಆರಂಭಕ್ಕೆ ದಿನ ನಿಗದಿ ಪಡಿಸಿರುವ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ, ಆ.13, 14, 16 ಹಾಗೂ 18 ರಂದು ಒಟ್ಟು 17 ಸಾಕ್ಷಿಗಳು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡುವಂತೆ ಆದೇಶ ನೀಡಿದ್ದಾರೆ. ಸಾಕ್ಷಿಗಳ ವಿಚಾರಣೆಯನ್ನು ವಿಶೇಷ ಸರಕಾರಿ ಅಭಿಯೋಜಕ ಶಾಂತರಾಮ್ ಶೆಟ್ಟಿ ಹಾಗೂ ಆರೋಪಿಗಳ ಪರ ವಕೀಲ ನಾರಾಯಣ ಪೂಜಾರಿ, ಅರುಣ್ ಬಂಗೇರ, ವಿಕ್ರಂ ಹೆಗ್ಡೆ ನಡೆಸಲಿದ್ದಾರೆ.
ಪ್ರಕರಣದ ಒಟ್ಟು 167 ಸಾಕ್ಷಿಗಳ ಪೈಕಿ ಈ ಹಿಂದೆ 44 ಸಾಕ್ಷಿಗಳನ್ನು ಗುರುತಿಸಿ ಸಮನ್ಸ್ ಜಾರಿ ಮಾಡಲಾಗಿತ್ತು. ಇದರಲ್ಲಿ ಪ್ರಮುಖ ಸಾಕ್ಷಿಗಳಾದ ಗುಲಾಬಿ ಶೆಡ್ತಿ, ಪೊಲೀಸ್ ಅಧಿಕಾರಿ ಎಸ್. ವಿ.ಗಿರೀಶ್ ಸೇರಿದಂತೆ ಒಟ್ಟು 11ಮಂದಿ ಸಾಕ್ಷಿಗಳನ್ನು ಎರಡು ಹಂತವಾಗಿ ವಿಚಾರಣೆ ಮಾಡಲಾಗಿತ್ತು.
ಹಿಂದಿನ ಕೊನೆಯ ವಿಚಾರಣೆಯ ದಿನವಾದ ಜು.19ರಂದು ಉಡುಪಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಅವರನ್ನು ಬಳಿಕ ಬಿಗಿ ಭದ್ರತೆಯಲ್ಲಿ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿಗೆ ಕರೆದುಕೊಂಡು ಹೋಗಲಾಗಿತ್ತು. ಆ.13ರಿಂದ ಆರಂಭವಾಗುವ ವಿಚಾರಣೆಗೆ ಈ ಮೂವರು ಆರೋಪಿಗಳನ್ನು ಪೊಲೀಸರು ಮತ್ತೆ ಬೆಂಗಳೂರು ಜೈಲಿನಿಂದ ಉಡುಪಿಗೆ ಕರೆದುಕೊಂಡು ಬಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ವಿಚಾರಣೆ ಮುಗಿಯುವ ವರೆಗೆ ಆರೋಪಿಗಳು ಹಿಂದಿನಂತೆ ಮಂಗಳೂರು ಜೈಲಿನಲ್ಲಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.