ಹುಬ್ಬಳ್ಳಿ: ಕೇಂದ್ರ ಸರ್ಕಾರದ ಜನರ ಅನುಕೂಲಕ್ಕಾಗಿ ಜಾರಿಗೆ ತಂದಿರುವ ಭಾರತ್ ಬ್ರ್ಯಾಂಡ್ ಉತ್ಪನ್ನಗಳ ಮಾರಾಟ ಮತ್ತೆ ಶುರುವಾಗಿದೆ. ಭಾರತ್ ಬ್ರ್ಯಾಂಡ್ ಹೆಸರಿನಲ್ಲಿ ಅಕ್ಕಿ, ಬೇಳೆ, ಗೋಧಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ.
ಇಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಆಹಾರ ಖಾತೆ ಸಚಿವ ಪ್ರಹ್ಲಾದ್ ಜೋಶಿ ಭಾರತ್ ಬ್ರ್ಯಾಂಡ್ ಉತ್ಪನ್ನವಿರುವ 50 ಕ್ಕೂ ಹೆಚ್ಚು ವಾಹನಗಳಿಗೆ ಚಾಲನೆ ನೀಡಿದರು. ಜೊತೆಗೆ ಸ್ಥಳೀಯವಾಗಿ ಅಲ್ಲಿ ನೆರೆದಿದ್ದ ಮಹಿಳೆಯರಿಗೆ ಉತ್ಪನ್ನಗಳನ್ನು ವಿತರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ, ಭಾರತ್ ಬ್ರ್ಯಾಂಡ್ ನ ಅಡಿಯಲ್ಲಿ ಅಕ್ಕಿ, ಬೇಳೆ, ಗೋಧಿ ಹಿಟ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಿದ್ದೇವೆ. ಜನರ ಅನುಕೂಲದ ದೃಷ್ಟಿಯಿಂದ, ಕಡು ಬಡವರಿಗೂ ಆಹಾರ ಉತ್ಪನ್ನ ತಲುಪಬೇಕು ಎಂಬ ಉದ್ದೇಶದಿಂದ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ ಎಂದಿದ್ದಾರೆ.
ಸಾರ್ವಜನಿಕರಿಗೆ ಅಗ್ಗದ ಬೆಲೆಯಲ್ಲಿ ಭಾರತ್ ಬ್ರ್ಯಾಂಡ್ ಉತ್ಪನ್ನಗಳು ಸಿಗಲಿವೆ. ಭಾರತ್ ಬ್ರ್ಯಾಂಡ್ ವಾಹನಗಳಲ್ಲಿ ಅಥವಾ ಎಲ್ಲಾ ನಾಫೆಡ್, ಬಿಗ್ ಬಜಾರ್, ರಿಲಯನ್ಸ್ ನಂತಹ ಮಳಿಗೆಗಳು, ಆನ್ ಲೈನ್ ಗಳಲ್ಲಿ ರಿಯಾಯಿತಿ ದರದ ಅಕ್ಕಿ, ಗೋಧಿ ಹಿಟ್ಟು, ಬೇಳೆ ಗ್ರಾಹಕರಿಗೆ ಲಭ್ಯವಾಗಲಿದೆ.