ಬೆಂಗಳೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಡಾ, ವಾಲ್ಮೀಕಿ ಹಗರಣ ಆರೋಪ ಮಾಡುತ್ತಿರುವ ಬಿಜೆಪಿ ವಿರುದ್ಧ ಈಗ ಕೊವಿಡ್ ಹಗರಣ, ಭಾಗ್ಯಲಕ್ಷ್ಮಿ ಹಗರಣದ ಆರೋಪ ಕೇಳಿಬರುತ್ತಿದೆ.
ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಜನಪ್ರಿಯ ಯೋಜನೆ ಭಾಗ್ಯಲಕ್ಷ್ಮಿ ಯೋಜನೆ. ಈ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತ ಸೀರೆ ಹಂಚಿಕೆ ಮಾಡಲು 23 ಕೋಟಿ ರೂ ಹಗರಣ ನಡೆದಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮಾಧ್ಯಮ ಮುಖ್ಯಸ್ಥ ರಮೇಶ್ ಬಾಬು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 2011 ರಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಡಿಯಲ್ಲಿ ಉಚಿತ ಸೀರೆ ಹಂಚಿಕೆ ಮಾಡಲು 23 ಕೋಟಿ ರೂ ಹಗರಣ ನಡೆದಿದೆ ಎಂದು ಆರೋಪಿಸಿದ್ದಾರೆ. 100 ರೂ. ಬೆಲೆಯ ಸೀರೆಯನ್ನು ಹೆಚ್ಚಿನ ಬೆಲೆಗೆ ಖರೀದಿ ಮಾಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಇಂತಹ 10 ಲಕ್ಷ ಸೀರೆಗಳನ್ನು ಹೆಚ್ಚು ಬೆಲೆ ನೀಡಿ ಖರೀದಿ ಮಾಡಲಾಗಿತ್ತು. ಈ ಬಗ್ಗೆ ತನಿಖೆ ನಡೆಸಲು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಲಾಗಿದೆ ಎಂದು ರಮೇಶ್ ಬಾಬು ಹೇಳಿದ್ದಾರೆ. ಕಾಂಗ್ರೆಸ್ ವಿರುದ್ಧ ಮುಡಾ, ವಾಲ್ಮೀಕಿ ಹಗರಣದ ಆರೋಪ ಮಾಡುತ್ತಿರುವ ಬಿಜೆಪಿಗೆ ಈ ಹಗರಣ ಮತ್ತೊಂದು ತಲೆನೋವಾಗಲಿದೆ.