ಬೆಂಗಳೂರು: ಗುಣಮಟ್ಟದ ಶಿಕ್ಷಣವೂ ಗುಣಮಟ್ಟದ ಜೀವನದ ತಳಹದಿ. ರಾಷ್ಟ್ರೀಯ ಶಿಕ್ಷಣ ನೀತಿಯು ಈ ನಿಟ್ಟಿನಲ್ಲಿ ಸಮಾಜಕ್ಕೆ ಒಳ್ಳೆ ಪರಿಹಾರ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ಅವರು ಹೇಳಿದರು.
ನಗರದ ಗಾರ್ಡನ್ ಸಿಟಿ ಕಾಲೇಜ್ ನಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಶಿಕ್ಷಣ ನೀತಿ ಜಾರಿ ಕುರಿತ ಕಾರ್ಯಾಗಾರದಲ್ಲಿ ವರ್ಚುವಲ್ ಮೂಲಕ ಭಾಗವಹಿಸಿ ಅವರು ಮಾತನಾಡಿದರು.
ನೂತನ ಶಿಕ್ಷಣ ನೀತಿ ಜಾರಿ ಬಗ್ಗೆ ಎಲ್ಲಾ ಪದವಿ ಕಾಲೇಜ್ ಗಳು ಉತ್ತಮ ಸಹಕಾರ ನೀಡುತ್ತಿವೆ. ವಿದ್ಯಾರ್ಥಿಗಳಿಂದ ಕೂಡ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ನೀತಿಯನ್ನು ಮತ್ತಷ್ಟು ಹುರುಪಿನಿಂದ ಜಾರಿ ಮಾಡಲು ಸರಕಾರಕ್ಕೆ ಇನ್ನಷ್ಟು ಶಕ್ತಿ ಬಂದಿದೆ ಎಂದು ಸಚಿವರು ಹೇಳಿದರು.
ಸಮಾಜದ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಶಿಕ್ಷಣ ಮಾತ್ರ ಸಹಕಾರಿ. ನಮ್ಮ ದೇಶ ಅಭಿವೃದ್ಧಿ ಹೊಂದಿದ ದೇಶವಾಗಿ ಬದಲಾಗಲು ನೂತನ ಶಿಕ್ಷಣ ನೀತಿ ಅತಿ ದೊಡ್ಡ ಮಾರ್ಗವಾಗಿದೆ ಎಂದು ಅವರು ನುಡಿದರು.
ಈಗಾಗಲೇ ನೀತಿ ಜಾರಿಗೆ ಶೈಕ್ಷಣಿಕ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಉಳಿದ ಸುಧಾರಣೆಗಳನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು. ಗುಣಮಟ್ಟದ ಶಿಕ್ಷಣದಿಂದ ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆ ಆಗಲಿದೆ ಎಂದು ಅವರು ಹೇಳಿದರು.
ಗಾರ್ಡನ್ ಸಿಟಿ ಕಾಲೇಜ್ ನ ಮುಖ್ಯಸ್ಥ ಡಾ.ಜೋಸೆಫ್, ಉದ್ಯಮಿ ಜೇಕಬ್ ಕ್ರಾಸ್ತಾ, ಕಾಲೇಜ್ ನಿರ್ದೇಶಕ ಕ್ರಿಸ್ಟೋ ಜೋಸೆಫ್ ಮುಂತಾದವರು ಹಾಜರಿದ್ದರು.