ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರ್ಕ್ ಫ್ರಾಮ್ ಆಫೀಸ್ ಮತ್ತ ಆರಂಭವಾಗಿದೆ. ಈವರೆಗೂ ಮನೆಯಲ್ಲೇ ಕುಳಿತುಕೊಂಡು ಕೆಲಸ ಮಾಡುತ್ತಿದ್ದವರು ಈಗ ಆಫೀಸ್ಗೆ ಹೋಗಲು ಆರಂಭಿಸಿದ್ದಾರೆ. ಇದರ ಬೆನ್ನಲ್ಲಿಯೇ ನಗರದ ಎರಡು ರೈಡ್ ಹೇಲಿಂಗ್ ಆ್ಯಪ್ಗಳಾದ ಒಲಾ ಹಾಗೂ ಉಬರ್ಗೂ ಬೇಡಿಕೆ ಹೆಚ್ಚಾಗಿದೆ. ಆದರೆ, ಪ್ರಸ್ತುತ ಆ್ಯಪ್ಗಳಲ್ಲಿ ಮೊದಲ ಪ್ರಯತ್ನದಲ್ಲಿಯೇ ರೈಡ್ ಬುಕ್ ಮಾಡುವುದು ಕಷ್ಟವಾಗುತ್ತಿದೆ ಎನ್ನುವುದು ಬಹುತೇಕ ಹೆಚ್ಚಿನವರ ಅಭಿಪ್ರಾಯ. ಈ ಕುರಿತಾಗಿ ಟ್ವಿಟರ್ನಲ್ಲಿ ತಮ್ಮ ಬೇಸರವನ್ನೂ ತೋಡಿಕೊಂಡಿದ್ದಾರೆ. ಜನಾಗ್ರಹದಲ್ಲಿ ಕೆಲಸ ಮಾಡುವ ಶ್ರೀನಿವಾಸ್ ಅಲವಿಲ್ಲಿ ಈ ಬಗ್ಗೆ ಟ್ವಿಟರ್ನಲ್ಲಿ ಬರೆದಿದ್ದಾರೆ. "ನಾನು ಸ್ವಲ್ಪ ಆತುರದಲ್ಲಿದ್ದ ಕಾರಣ, 15 ಪಟ್ಟು ಹೆಚ್ಚಿನ ಹಣವನ್ನು ಕೊಟ್ಟು ಕ್ಯಾಬ್ನಲ್ಲಿ ಹೋಗಬೇಕು ಎಂದು ನಿರ್ಧರಿಸಿದರೂ ನನಗೆ ಕ್ಯಾಬ್ ಸಿಕ್ಕಿರಲಿಲ್ಲ. ಬುಕ್ಕಿಂಗ್ನಲ್ಲಿ ಟೈಮ್ ಹಾಳು ಮಾಡಿದ್ದಲ್ಲದೆ, ಹಾಗೇನಾದರೂ ಬುಕ್ ಆದಲ್ಲಿ, ಕರೆ ಮಾಡುವ ಡ್ರೈವರ್ "ಎಲ್ಲಿ ಸಾರ್' ಎಂದು ಕೇಳುತ್ತಿದ್ದ ಹಾಗೂ ಆತನ ಮುಂದಿನ ಉತ್ತರ ಏನು ಅನ್ನೋದನ್ನು ನೀವೇ ಅರ್ಥ ಮಾಡಿಕೊಳ್ಳಬಹುದು. ಆದರೆ, ಬಿಎಂಟಿಸಿಯ ಸುಂದರ 13ನೇ ನಂಬರ್ನ ಬಸ್ನಲ್ಲಿ ಜಯನಗರದವರೆಗೆ ಬರೀ 20 ರೂಪಾಯಿಯಲ್ಲಿ ಪ್ರಯಾಣ ಮಾಡಿದೆ' ಎಂದು ಬರೆದುಕೊಂಡಿದ್ದಾರೆ.