ಎಂಜಿ ರೋಡ್, ಬ್ರಿಗೇಡ್ ರೋಡ್‌ಗಳಲ್ಲಿ ಸಿಸಿಟಿವಿ ಅಳವಡಿಕೆ
– ನೈಟ್ ಕರ್ಫ್ಯೂ ವೇಳೆ ಯಾರಿಗೂ ಪಾಸ್ ನೀಡಲ್ಲ
– ಅಬಕಾರಿ ಇಲಾಖೆಯಿಂದ ಸ್ಪೆಷಲ್ ಸ್ಕ್ವ್ಯಾಡ್‌ಗಳ ರಚನೆ.
ಬೆಂಗಳೂರು: ನೈಟ್ ಕರ್ಫ್ಯೂ ವೇಳೆ ಸರ್ಕಾರದ ಗೈಡ್‌ಲೈನ್‌ಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲನೆ ಮಾಡಬೇಕು. ಇಲ್ಲವಾದರೆ ಅವರ ಮೇಲೆ ದೂರು ದಾಖಲಿಸಲಾಗುವುದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ತಡೆಗಟ್ಟುವ ಹಿನ್ನೆಲೆಯಲ್ಲಿ ಹತ್ತು ಗಂಟೆಯಿಂದ ಐದು ಗಂಟೆ ತನಕ ನೈಟ್ ಕರ್ಫ್ಯೂ ಜಾರಿಯಾಗಿದ್ದು, ಆ ಸಮಯದಲ್ಲಿ ಅನಾವಶ್ಯಕವಾಗಿ ಯಾರು ಹೊರಗಡೆ ಬರುವಂತಿಲ್ಲ. ಜೊತೆಗೆ ಯಾರಿಗೂ ಯಾವುದೇ ಪಾಸ್ ನೀಡಲಾಗುವುದಿಲ್ಲ. ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಲಾಗಿದೆ. ಒಂದು ವೇಳೆ ತುರ್ತಾಗಿ ಆಸ್ಪತ್ರೆ, ರೈಲ್ವೆಗೆ ಹೋಗುವವರು ಕಡ್ಡಾಯವಾಗಿ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಬೇಕು. ಎಂದು ಖಡಕ್ ಸೂಚನೆ ನೀಡಿದರು.
ಈಗಿರುವ ನಿಯಮಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳಿಲ್ಲ. ಈಗಾಗಲೇ ಸಂಬಂಧಪಟ್ಟ ಪಬ್, ರೆಸ್ಟೋರೆಂಟ್ ಮಾಲೀಕರಿಗೆ ಮಾಹಿತಿ ನೀಡಿದ್ದೇವೆ. ಇವತ್ತು ಮತ್ತೊಮ್ಮೆ ಸಭೆ ಸೇರಿ ಪರಿಣಾಮಕಾರಿಯಾಗಿ ಜಾರಿ ಮಾಡಲು ತಿರ್ಮಾನ ಮಾಡುತ್ತೇವೆ. ಸರ್ಕಾರದ ಆದೇಶವನ್ನು ಅನುಸರಿಸುವುದು ನಮ್ಮ ಕರ್ತವ್ಯವಾಗಿದೆ ಎಂದ ಅವರು ಜನರು ಗುಂಪು ಸೇರದೆ, ಮಾರ್ಗಸೂಚಿಯನ್ನು ಅನುಸರಿಸಿ ಎಂದು ಮನವಿ ಮಾಡಿದರು.
ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಎಮ್‌ಜಿ ರೋಡ್, ಬ್ರಿಗೇಡ್ ರೋಡ್, ಇಂದಿರಾನಗರದಲ್ಲಿ ಪೊಲೀಸ್ ಸಿಬ್ಬಂದಿ ಹೆಚ್ಚಿಸುವುದರ ಜೊತೆಗೆ ಸಿಸಿಟಿವಿ ಅವಳಡಿಕೆ ಸಿದ್ಧತೆ ನಡೆಸಲಾಗುತ್ತಿದೆ. ಬಂದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ(ಎನ್‌ಡಿಎಂಎ) ಅಡಿ ಕೇಸ್ ದಾಖಲು ಮಾಡಿ ಕ್ರಮ ಕೈಗೊಳ್ಳುತ್ತೇವೆ. ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‌ನಲ್ಲಿ ಹೆಚ್ಚುವರಿಯಾಗಿ 150 ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ ಜೊತೆಗೆ ನಾಕಾಬಂದಿ ಹಾಕಿ ಪರಿಶೀಲನೆ ನಡೆಸಲಾಗುತ್ತದೆ ಎಂದರು.
ಹೊಸವರ್ಷ ಆಚರಣೆಯ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯಿಂದ ಸ್ಪೆಷಲ್ ಸ್ಕ್ವ್ಯಾಡ್‌ಗಳ ರಚನೆ ಮಾಡಲಾಗಿದೆ. ಈ ಸಂಬಂಧ ಇದೇ ತಿಂಗಳ 29ರಿಂದ ಸ್ಪೆಷಲ್ ಸ್ಕ್ವ್ಯಾಡ್‌ಗಳು ಕಾರ್ಯಾಚರಣೆ ಕೈಗೊಳ್ಳುತ್ತಾರೆ. ಅಕ್ರಮವಾಗಿ ಮದ್ಯ ಸಂಗ್ರಹಣೆ ಮಾಡುವುದು, ಔಟ್ ಲೆಟ್‌ಗಳಲ್ಲಿ ಹೆಚ್ಚಿನ ಮದ್ಯ ಖರೀದಿಸುವುದರ ವಿರುದ್ಧ ಅಬಕಾರಿ ಇಲಾಖೆಯಿಂದ ವಿಚಕ್ಷಣ ದಳ ಕಾರ್ಯಾಚರಣೆ ಮಾಡಲಿದೆ ಎಂದು ಮಾಹಿತಿ ನೀಡಿದರು.