ಬೆಂಗಳೂರು: ಪ್ರಾಣಿಪ್ರಿಯರು ಬೆಂಗಳೂರಿನಲ್ಲಿ ಬೀದಿ ನಾಯಿಗಳಿಗೆ ಊಟ ಹಾಕುವ ಕೆಲಸ ಮಾಡುತ್ತಾರೆ. ಆದರೆ ಇದಕ್ಕೀಗ ಬಿಬಿಎಂಪಿ ಸಮಯ ನಿಗದಿ ಮಾಡಿದ್ದು ಸಿಕ್ಕ ಸಿಕ್ಕ ಟೈಂನಲ್ಲಿ ಊಟ ಹಾಕಿ ಸಾರ್ವಜನಿಕರಿಗೆ ತೊಂದರೆ ಮಾಡಬಾರದು ಎಂದು ಷರತ್ತು ವಿಧಿಸಿದೆ.
ಸಾಮಾನ್ಯವಾಗಿ ಪ್ರಾಣಿ ಪ್ರಿಯರು ಅಪಾರ್ಟ್ ಮೆಂಟ್ ಗಳ ಮುಂದೆ, ಫುಟ್ ಪಾತ್ ಗಳಲ್ಲಿ ಎಂಬಂತೆ ಸಿಕ್ಕ ಸಿಕ್ಕಲ್ಲಿ ಮಿಕ್ಕಿದ ಅನ್ನವನ್ನು ಬಿಸಾಕಿ ಹೋಗುತ್ತಾರೆ. ಇದನ್ನು ನಾಯಿಗಳು ತಿನ್ನಲಿ ಎನ್ನುವುದು ಅವರ ಉದ್ದೇಶ. ಆದರೆ ಇದರಿಂದ ಕೆಲವರಿಗೆ ಓಡಾಡಲು ಕಿರಿ ಕಿರಿಯಾಗುತ್ತದೆ.
ಇದೇ ರೀತಿ ಬೀದಿ ನಾಯಿಗೆ ಆಹಾರ ಹಾಕುವ ವಿಚಾರದಲ್ಲಿ ಎಷ್ಟೋ ಬಾರಿ ಜಗಳಗಳು ನಡೆದಿದ್ದ ಉದಾಹರಣೆಗಳಿವೆ. ಊಟ ತಿನ್ನಲು ಬರುವ ನಾಯಿಗಳು ಸ್ಥಳೀಯರಿಗೆ ಕಚ್ಚಿದ ಪ್ರಸಂಗಗಳೂ ನಡೆದಿವೆ. ಹೀಗಾಗಿ ಊಟ ನೀಡಲು ಬಿಬಿಎಂಪಿ ಸಮಯ ನಿಗದಿ ಮಾಡಲು ನಿರ್ಧರಿಸಿದೆ.
ಬೆಳಿಗ್ಗೆ 5 ಗಂಟೆಯೊಳಗೆ ಅಥವಾ ರಾತ್ರಿ 10 ರೊಳಗಾಗಿ ಮಾತ್ರ ಬೀದಿ ನಾಯಿಗಳಿಗೆ ಆಹಾರ ನೀಡಬೇಕು ಎಂದು ಬಿಬಿಎಂಪಿ ಆದೇಶ ನೀಡಿದೆ. ಅದೂ ಊಟ ಹಾಕುವ ಸ್ಥಳಗಳಲ್ಲಿ ಬೋರ್ಡ್ ಹಾಕಲಾಗುತ್ತದೆ. ಅಲ್ಲಿ ಮಾತ್ರ ಊಟ ನೀಡಬಹುದು. ಅಲ್ಲದೆ ಈ ಬಗ್ಗೆ ಏನಾದರೂ ಸಮಸ್ಯೆಯಾದರೆ ಸಂಪರ್ಕಿಸಲು ಅಧಿಕಾರಿಗಳ ನಂಬರ್ ನೀಡಲಾಗುತ್ತದೆ ಎಂದು ಬಿಬಿಎಂಪಿ ಪ್ರಕಟಿಸಿದೆ.