ಬೆಂಗಳೂರು: ಬಸವೇಶ್ವರ ಜಯಂತಿಯ ಹೊಸ್ತಿಲಲ್ಲಿ ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣದಲ್ಲಿ ಬಸವೇಶ್ವರರ ಪುತ್ಥಳಿ ತೆರವುಗೊಳಿಸುವ ಮೂಲಕ ಬಸವೇಶ್ವರರಿಗೆ ಅಪಚಾರ ಎಸಗಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಅಣ್ಣ ಬಸವಣ್ಣನವರಿಗೆ ಒಂದು ಕಡೆ ಗೌರವ ಕೊಟ್ಟಂತೆ ನಟಿಸುವುದು, ಮತ್ತೊಂದು ಕಡೆ ವಿರೋಧಿಸುವುದು, ಇದು ಕಾಂಗ್ರೆಸ್ ಸರ್ಕಾರದ ಬಸವ ವಿರೋಧಿ ಮನಸ್ಥಿತಿಗೆ ಸಾಕ್ಷಿಯಾಗಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ನಿಯಮಾನುಸಾರ ಬಸವ ಪುತ್ಥಳಿ ಅಳವಡಿಸಬೇಕಾಗಿರುವುದು ಸರ್ಕಾರದ ಕರ್ತವ್ಯವಾಗಬೇಕಿತ್ತು, ಈ ಸಂಬಂಧ ಬಸವ ಅಭಿಮಾನಿಗಳು ನಗರ ಸಭೆಗೆ ನಿರಂತರ ಮನವಿ ಮಾಡಿದ್ದಾರೆ, ಆದರೆ ಇದನ್ನು ಉಪೇಕ್ಷಿಸಿರುವ ಜಿಲ್ಲಾಡಳಿತ ಪುತ್ಥಳಿ ಪ್ರತಿಷ್ಠಾಪನೆಯ ವಿಷಯವನ್ನು ಕಾನೂನಾತ್ಮಕವಾಗಿ, ಸೌಹಾರ್ದತೆಯಿಂದ ಬಗೆಹರಿಸುವುದು ಬಿಟ್ಟು ಏಕಾಏಕಿ ತೆರವುಗೊಳಿಸಿರುವುದು ಸಹಜವಾಗಿಯೇ ಬಸವ ಕುಲವನ್ನು ನೋಯಿಸಿದ ಕ್ರಮವಾಗಿದೆ.
ಈ ಸಂಬಂಧ ಸಾಂಸ್ಕೃತಿಕ ಸಂಘರ್ಷಕ್ಕೆ ಅವಕಾಶ ನೀಡದಂತೆ ಕೂಡಲೇ ಜರೂರು ಕ್ರಮ ವಹಿಸಿ ಬಸವ ಭಕ್ತರಿಗೆ ಒಪ್ಪಿತವಾಗುವ ಮಾರ್ಗೋಪಾಯವನ್ನು ಜಿಲ್ಲಾಡಳಿತ ಕಂಡುಹಿಡಿಯಲಿ.