ಒಂದೆಡೆ ಪೆಟ್ರೋಲ್ ಮತ್ತು ಡೀಸೆಲ್ ದರ ಶರವೇಗದಲ್ಲಿ ಏರುತ್ತಿದ್ದರೆ, ಅದಕ್ಕೆ ತದ್ವಿರುದ್ಧವಾಗಿ ನಗರದ ಅಭಿವೃದ್ಧಿ ಕಾಮಗಾರಿಗಳು ಆಮೆ ವೇಗದಲ್ಲಿ ನಡೆಯುತ್ತಿವೆ. ಕಾಮಗಾರಿಗಳ ಸಲುವಾಗಿ ವರ್ಷಾನುಗಟ್ಟಲೆಯಿಂದ ರಸ್ತೆಗಳನ್ನು ಬಂದ್ ಮಾಡಿರುವುದರಿಂದ ಕೊಂಕಣ ಸುತ್ತಿ ಮೈಲಾರ ಸೇರಬೇಕಾದ ಪಾಡು ವಾಹನ ಸವಾರರದ್ದು.ಸುತ್ತಿ ಬಳಸಿ ಸಂಚರಿಸಬೇಕಾದ ಅನಿವಾರ್ಯ ಸ್ಥಿತಿ ವಾಹನ ಸವಾರರ ಕಿಸೆಗೂ ಕತ್ತರಿ ಬೀಳುವಂತೆ ಮಾಡುತ್ತಿದೆ.
ಶಿವಾನಂದ ವೃತ್ತ, ಅರಮನೆ ರಸ್ತೆ, ಮಹಾತ್ಮ ಗಾಂಧಿ ರಸ್ತೆ, ಗೂಡ್‌ಶೆಡ್ ರಸ್ತೆಗಳಲ್ಲಿ ವಾಹನ ಸವಾರರು ಅನುಭವಿಸುತ್ತಿರುವ ಸಮಸ್ಯೆಗಳು ಇದಕ್ಕೆ ಉದಾಹರಣೆಗಳು. ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ₹109 ದಾಟಿದ್ದರೆ, ಡೀಸೆಲ್ ದರ ಪ್ರತಿ ಲೀಟರ್‌ಗೆ ₹100ರ ಗಡಿ ದಾಟಿದೆ. ತಮ್ಮದಲ್ಲದ ತಪ್ಪಿಗೆ ವಾಹನ ಸವಾರರು ದಿನವೂ ಪೆಟ್ರೋಲ್ ಮತ್ತು ಡೀಸೆಲ್‌ಗಾಗಿ ಹೆಚ್ಚುವರಿ ವೆಚ್ಚ ಮಾಡುವ ಮೂಲಕ ದಂಡ ತೆರುತ್ತಿದ್ದಾರೆ.
ಶಿವಾನಂದ ವೃತ್ತದಲ್ಲಿ ಉಕ್ಕಿನ ಸೇತುವೆ ಕಾಮಗಾರಿ ಆರಂಭವಾಗಿ ಐದು ವರ್ಷಗಳೇ ಕಳೆದಿವೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ಶಿವಾನಂದ ವೃತ್ತದಲ್ಲಿ ಕಾಮಗಾರಿ ಆರಂಭವಾಗಿತ್ತು. ಇದಾದ ನಂತರ ಮೂರು ಸರ್ಕಾರಗಳು ಬದಲಾದರೂ ಶಿವಾನಂದ ವೃತ್ತದ ಮೇಲ್ಸೇತುವೆ ಕಾಮಗಾರಿಗೆ ಮುಕ್ತಿ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ.