ಬೆಂಗಳೂರು: ವಾಯುಭಾರ ಕುಸಿತದಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟದಾದ್ಯಂತ ಭಾರೀ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಬೆಳಿಗ್ಗೆನಿಂದಲೇ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಜನ ಕಚೇರಿಗಳಿಗೆ ತೆರಳುವುದೂ ಕಷ್ಟವಾಗಿದೆ. ರಸ್ತೆಗಳು ಸ್ವಿಮ್ಮಿಂಗ್ ಪೂಲ್ ನಂತಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಜೊತೆಗೆ ಬೀದಿ ಬದಿ ವ್ಯಾಪಾರಿಗಳಿಗೂ ವ್ಯಾಪಾರ ಕಷ್ಟವಾಗಿದೆ.
ವಾಯುಭಾರ ಕುಸಿತದಿಂದಾಗಿ ಕಳೆದ ನಾಲ್ಕೈದು ದಿನಗಳಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಅದರಲ್ಲೂ ಇಂದು ನಿನ್ನೆಗಿಂತಲೂ ಹೆಚ್ಚು ಮಳೆಯಾಗುತ್ತಿದೆ. ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ವರದಿ ನೀಡಿತ್ತು.
ನಿರೀಕ್ಷೆಯಂತೇ ಇಂದು ಬೆಂಗಳೂರಿನ ಎಲ್ಲಾ ಭಾಗಗಳಲ್ಲಿ ದಟ್ಟ ಮೋಡ ಕವಿದ ವಾತಾವರಣದ ಜೊತೆಗೆ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ರಸ್ತೆಗಳಲ್ಲಿ ಜನ ಸಂಚಾರವೇ ಕಡಿಮೆಯಾಗಿದೆ. ಆದರೆ ಅನಿವಾರ್ಯವಾಗಿ ಕಚೇರಿ, ಶಾಲೆಗಳಿಗೆ ತೆರಳಬೇಕಾದವರು ಮಳೆಯಲ್ಲಿಯೇ ಒದ್ದೆಯಾಗಿಕೊಂಡು ತೆರಳುವಂತಾಗಿದೆ. ಹವಾಮಾನ ಇಲಾಖೆ ವರದಿ ಪ್ರಕಾರ ಇನ್ನೂ ಮೂರು ದಿನ ಮಳೆಯ ವಾತಾವರಣ ಮುಂದುವರಿಯಲಿದೆ.