ಸಿಲಿಕಾನ್ ಸಿಟಿಯಲ್ಲಿ ಮುಂಜಾನೆ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಸೌತ್ ಇಂಡಿಯಾ ಮಾಲ್‍ನಲ್ಲಿರುವ ರಿಲಯನ್ಸ್ ಮಳಿಗೆ ಹೊತ್ತಿ ಉರಿದಿದೆ. ಬನ್ನೇರುಘಟ್ಟ ರಸ್ತೆಯ ಅರಕೆರೆ ಸಿಗ್ನಿಲ್ ಬಳಿ ಈ ಮಳಿಗೆ ಇದ್ದು , ಇಂದು ಮುಂಜಾನೆ 3 ಗಂಟೆ ಸುಮಾರಿನಲ್ಲಿ ನೆಲಮಾಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡು ವ್ಯಾಪಕವಾಗಿ ಹರಡಿದೆ.
ಸುದ್ದಿ ತಿಳಿದ ತಕ್ಷಣ ಅಗ್ನಿ ಶಾಮಕ ಸಿಬ್ಬಂದಿ 8 ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಸತತ ಏಳೆಂಟು ಗಂಟೆ ಪರಿಶ್ರಮದಿಂದ ಬೆಂಕಿ ನಂದಿಸಲು ಹರಸಾಹಸಪಟ್ಟು ಕೊನೆಗೂ 11 ಗಂಟೆ ಸುಮಾರಿಗೆ ಬೆಂಕಿ ತಹಬದಿಗೆ ಬಂದಿದ್ದು, ಹೆಚ್ಚಿನ ದುರಂತ ತಪ್ಪಿದಂತಾಗಿದೆ.
ಈ ಕಟ್ಟಡದ ನೆಲಮಾಳಿಗೆಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು , ಅಲ್ಲಿದ್ದ ವಸ್ತುಗಳು, ಬಟ್ಟೆಗಳು ಹೊತ್ತಿ ಉರಿದು ಮಾಳಿಗೆ ಪೂರ್ತಿ ಅವರಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸದ್ಯಕ್ಕೆ ಪರಿಸ್ಥಿತಿ ಹತೋಟಿಯಲ್ಲಿದ್ದು , ಬೆಂಕಿ ಅವಘಡಕ್ಕೆ ನಿಖರ ಕಾರಣ ಹಾಗೂ ಅಗ್ನಿ ದುರಂತದಿಂದ ಆದ ನಷ್ಟದ ಬಗ್ಗೆ ಸದ್ಯಕ್ಕೆ ತಿಳಿದುಬಂದಿಲ್ಲ.
ಸ್ಥಳಕ್ಕೆ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದು , ತನಿಖೆ ಕೈಗೊಂಡಿದ್ದಾರೆ.