ಗುಜರಾತ್‌ನ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಗೋಧ್ರೋತ್ತರ ಹಿಂಸಾಚಾರಗಳ ಹಿನ್ನೆಲೆಯಲ್ಲಿ ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಬೇಡಿಕೆ ಬಂದಾಗ ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಮೋದಿ ಅವರನ್ನು ಬೆಂಬಲಿಸಿದ್ದರು' ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾನುವಾರ ಹೇಳಿದ್ದಾರೆ.
ಮರಾಠಿ ದೈನಿಕ 'ಲೋಕಸತ್ತಾ'ಗೆ ನೀಡಿದ ಸಂದರ್ಶನದಲ್ಲಿ ಠಾಕ್ರೆ ಈ ಹೇಳಿಕೆ ನೀಡಿದ್ದಾರೆ. 'ಬಿಜೆಪಿ ದಿಗ್ಗಜ ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಪ್ರಧಾನಿಯಾಗಿದ್ದಾಗ ಮೋದಿ ಅವರನ್ನು ಗುಜರಾತ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಬೇಡಿಕೆ ಜೋರಾಗಿತ್ತು. ಅದೇ ಅವಧಿಯಲ್ಲೇ ಮತ್ತೊಬ್ಬ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ಸಮಾವೇಶವೊಂದರಲ್ಲಿ ಭಾಗವಹಿಸಲೆಂದು ಮುಂಬೈಗೆ ಬಂದಿದ್ದರು. ಮೋದಿ ಅವರನ್ನು ಕೆಳಗಿಳಿಸುವ ಬೇಡಿಕೆ ಬಗ್ಗೆ ಬಾಳಾ ಠಾಕ್ರೆ ಅವರೊಂದಿಗೆ ಅಡ್ವಾಣಿ ಚರ್ಚಿಸಿದ್ದರು' ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
"ನಾವು (ಸಮಾವೇಶದ ನಂತರ) ಮಾತನಾಡುತ್ತ ಕುಳಿತಿದ್ದೆವು. ಅವರು (ಅಡ್ವಾಣಿ) ಬಾಳಾಸಾಹೇಬ್ ಅವರೊಂದಿಗೆ ಏನೋ ಒಂದು ವಿಷಯದ ಕುರಿತು ಚರ್ಚಿಸಬೇಕು ಎಂದು ಹೇಳಿದರು. ನಂತರ ನಾನು ಮತ್ತು ಪ್ರಮೋದ್ (ಮಹಾಜನ್) ಅಲ್ಲಿಂದ ಎದ್ದು ಹೊರಟೆವು. ಮೋದಿಯವರನ್ನು (ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕುವ ಬೇಡಿಕೆ) ಕುರಿತು ಮಾತನಾಡುತ್ತಾ ಅಡ್ವಾಣಿಯವರು ಬಾಳಾಸಾಹೇಬರ ಅಭಿಪ್ರಾಯ ಕೇಳಿದರು. ಮೋದಿಯನ್ನು ಮುಟ್ಟದಂತೆ ಬಾಳಾಸಾಹೇಬರು ಅಡ್ವಾಣಿಯವರಿಗೆ ಹೇಳಿದರು. ಮೋದಿಯನ್ನು ತೆಗೆದುಹಾಕಿದರೆ, (ಬಿಜೆಪಿ) ಗುಜರಾತ್ ಅನ್ನು ಕಳೆದುಕೊಳ್ಳಬೇಕಾಗುತ್ತದೆ ಮತ್ತು ಅದರಿಂದ ಹಿಂದುತ್ವಕ್ಕೂ ಹಾನಿಯಾಗುತ್ತದೆ' ಎಂದು ಅವರು ಹೇಳಿದ್ದರು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.