ಕಳೆದ ಏಳೆಂಟು ತಿಂಗಳಿನಿಂದ ಶಾಂತವಾಗಿದ್ದ ಧರ್ಮ ದಂಗಲ್ ಮತ್ತೆ ಶುರುವಾಗಿದೆ. ಇಂದು ಬೆಂಗಳೂರಿನ ವಿವಿ ಪುರಂಸುಬ್ರಹ್ಮಣ್ಯ ಸ್ವಾಮಿ ಜಾತ್ರೆ ನಡೆಯಲಿದೆ. ಜಾತ್ರೆಯಲ್ಲಿ ಅನ್ಯ ಧರ್ಮೀಯರ ವ್ಯಾಪಾರಕ್ಕೆ ಅವಕಾಶ ಕೊಡದಂತೆ ಹಿಂದೂ ಸಂಘಟನೆಗಳು ಒತ್ತಾಯಿಸಿದ್ದವು. ಹಿಂದೂ ಸಂಘಟನೆಗಳಿಂದ ಆಂತರಿಕ ಸಭೆ ನಡೆದಿದ್ದು, ಅನ್ಯಧರ್ಮೀಯರ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂಬ ನಿರ್ಣಯ ಮಾಡಿದ್ದಾರೆ. ಆದರೆ ಶಾಸಕ ಉದಯ್ ಗರುಡಾಚಾರ್ ಎಲ್ಲಾ ಧರ್ಮದವರಿಗೂ ಅವಕಾಶ ನೀಡಲಾಗುವುದು ಎಂದು ಹೇಳುವ ಮೂಲಕ ಹಿಂದೂ ಸಂಘಟನೆಗಳಿಗೆ ಎಚ್ಚರಿಕೆ ನೀಡಿದ್ದರು. ಜಾತ್ರೆಯಲ್ಲಿ ಗಲಭೆಗಳಿಗೆ ಅವಕಾಶ ಇಲ್ಲ. ಹಾಗೇನಾದ್ರೂ ಗಲಭೆ ಮಾಡಲು ಮುಂದಾದ್ರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಅಂತಾ ಎಚ್ಚರಿಕೆ ಕೊಟ್ಟಿದ್ದರು. ಇತ್ತ ಶಾಸಕರ ಎಚ್ಚರಿಕೆ ಬೆನ್ನಲ್ಲೇ ಟ್ವಿಟರ್, ವಾಟ್ಸಾಪ್‌ನಲ್ಲಿ ಹಿಂದೂ ಸಂಘಟನೆಗಳು ಅನ್ಯ ಧರ್ಮೀಯರ ಅಂಗಡಿಗಳಿಗೆ ಹೋಗದಂತೆ ಅಭಿಯಾನ ಆರಂಭಿಸಿವೆ. ಜಾತ್ರೆಯಲ್ಲಿ ಹಿಂದೂಗಳ ಬಳಿಯೇ ಖರೀದಿಸಿ ಎಂದು ಅಭಿಯಾನ ಮಾಡುತ್ತಿವೆ. ಇನ್ನು ಜಾತ್ರೆಯಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡಲ್ಲ ಎಂದು ಹೇಳಿದ್ದ ಭಜರಂಗದಳದ ಸಂಚಾಲಕ ತೇಜಸ್ ಗೌಡ ವಶಕ್ಕೆ ಪಡೆಯಲಾಗಿದೆ.