Webdunia - Bharat's app for daily news and videos

Install App

ಸಿದ್ದರಾಮಯ್ಯ ವಿಧಾನಸೌಧದಿಂದ ಓಡಿ ಹೋಗುವಂತೆ ಮಾಡಬೇಕು: ಬಿ ವೈ ವಿಜಯೇಂದ್ರ ಕರೆ

Krishnaveni K
ಗುರುವಾರ, 18 ಜುಲೈ 2024 (16:23 IST)
ಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡಗಳ ಹಣಕ್ಕೆ ಕನ್ನ ಹಾಕಿದ್ದು ಗೊತ್ತಾದ ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿ ಇಂದು ಸ್ವಾತಂತ್ರ್ಯ ಉದ್ಯಾನವನದ ಬಳಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಸಂಬಂಧ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ಮತ್ತು ಸಿಬಿಐ ತನಿಖೆಗೆ ಒತ್ತಾಯಿಸಿ ಈ ಪ್ರತಿಭಟನೆ ನಡೆಯಿತು.

ದೊಡ್ಡ ದೊಡ್ಡವರು ಹೇಳಿದ್ದಕ್ಕೆ ಹಣ ದುರುಪಯೋಗ ಎಂಬ ಮಾಹಿತಿಯನ್ನು ಇ.ಡಿ. ಕಸ್ಟಡಿಯಲ್ಲಿರುವ ನಾಗೇಂದ್ರ ಹೇಳಿದ್ದಾಗಿ ಮಾಹಿತಿ ಇದೆ. ಯಾವತ್ತು ಸರಕಾರ ಬೀಳುತ್ತೋ ಗೊತ್ತಿಲ್ಲ ಎಂಬ ಆತಂಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಸಚಿವರನ್ನು ಕಾಡುತ್ತಿದೆ. ಅವರಿಗೆ ಈಗ ನಿದ್ರೆ ಬರುತ್ತಿಲ್ಲ ಎಂದು ತಿಳಿಸಿದರು.
 
ಇ.ಡಿ. ಕಸ್ಟಡಿಯಲ್ಲಿರುವ ನಾಗೇಂದ್ರ ಎಲ್ಲಿ ತಮ್ಮ ಹೆಸರು ಹೇಳುವರೋ ಎಂಬ ಭಯ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳನ್ನು ಕಾಡುತ್ತಿದೆ. ಒಂದೆಡೆ ಎಸ್‍ಇಪಿ, ಟಿಎಸ್‍ಪಿ ಹಣವನ್ನು ಬೇರೆಡೆ ವರ್ಗಾವಣೆ ಮಾಡಿದ್ದಾರೆ. ಪರಿಶಿಷ್ಟರ ಅಭಿವೃದ್ಧಿಗೆ ಇಟ್ಟಿದ್ದ ಹಣ ವರ್ಗಾವಣೆ ಮಾಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲೂಟಿಯಾಗಿದೆ. ಮೈಸೂರಿನ ಸಾವಿರಾರು ಕೋಟಿ ಮೊತ್ತದ ಮುಡಾ ಹಗರಣದ ಮೂಲಕ ಸಿದ್ದರಾಮಯ್ಯನವರ ಬಂಡವಾಳ ಬಯಲಾಗಿದೆ ಎಂದು ಟೀಕಿಸಿದರು. ಬಡವರಿಗೆ ಕೊಡಬೇಕಾದ ನಿವೇಶನಗಳ ಪೈಕಿ 14 ನಿವೇಶನಗಳನ್ನು ತಮ್ಮ ಕುಟುಂಬಕ್ಕೆ ಕೊಡಿಸಿ ಲೂಟಿ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
 
ಯೋಗ್ಯತೆ, ನೈತಿಕತೆ ಇಲ್ಲ

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳುವ ಯೋಗ್ಯತೆ, ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಪರಿಶಿಷ್ಟ ಜಾತಿ, ಜನಾಂಗದವರ ಶಾಪ ನಿಮಗೆ ತಟ್ಟದೇ ಬಿಡುವುದಿಲ್ಲ. ಬಿಜೆಪಿ ರಾಜಕೀಯ ಮಾಡಲು ಬಂದಿಲ್ಲ; ನಮ್ಮ ಕರ್ತವ್ಯವನ್ನು ನಾವು ಈಡೇರಿಸುತ್ತಿದ್ದೇವೆ ಎಂದು ವಿಜಯೇಂದ್ರ ಅವರು ತಿಳಿಸಿದರು.
 
ಪೊಲೀಸರಿಗೆ ಹೆದರುವ ಪ್ರಶ್ನೆಯೇ ಇಲ್ಲ. ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಮುಖ್ಯಮಂತ್ರಿಗಳು ವಿಧಾನಸೌಧದಿಂದ ಓಡಿ ಹೋಗುವಂಥ ಪರಿಸ್ಥಿತಿ ನಿರ್ಮಾಣ ಮಾಡಬೇಕಿದೆ ಎಂದು ತಿಳಿಸಿದರು. ಮುಖ್ಯಮಂತ್ರಿಗಳಿಗೆ ಮನಸ್ಸಾಕ್ಷಿ ಇದ್ದರೆ ಇಷ್ಟೊತ್ತಿಗಾಗಲೇ ರಾಜೀನಾಮೆ ಕೊಡಬೇಕಿತ್ತು. ಬೂಟಾಟಿಕೆಯ ಹೋರಾಟ ಇದಲ್ಲ; ಭ್ರಷ್ಟ ಕಾಂಗ್ರೆಸ್ ಸರಕಾರ ಕಿತ್ತೊಗೆಯುವವರೆಗೆ, ಸಿಎಂ ರಾಜೀನಾಮೆ ಕೊಡುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಪ್ರಕಟಿಸಿದರು. ಯಾರೂ ಬಸ್ಸನ್ನೇರದಿರಿ. ಎಲ್ಲರೂ ವಿಧಾನಸೌಧ ಮುತ್ತಿಗೆ ಹಾಕೋಣ ಎಂದು ತಿಳಿಸಿದರು.

ಇದೊಂದು ಹಗರಣಗಳ ಸರಕಾರ: ಡಿವಿಎಸ್

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಮಾತನಾಡಿ, ಸುಳ್ಳು ಆಶ್ವಾಸನೆ ಮೂಲಕ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯರ ಸರಕಾರವು ಹಗರಣಗಳ ಸರಕಾರವಾಗಿ ಮಾರ್ಪಟ್ಟಿದೆ. ಹಿಂದೆ ದೇಶವನ್ನೇ ಕೊಳ್ಳೆ ಹೊಡೆದ ಕಾಂಗ್ರೆಸ್ ಸರಕಾರದ ಮಾದರಿಯಲ್ಲೇ ಈ ಸರಕಾರ ನಡೆದುಕೊಳ್ಳುತ್ತಿದೆ ಎಂದು ಟೀಕಿಸಿದರು. ಸಿದ್ದರಾಮಯ್ಯರು ಅಲಿಬಾಬಾ ಆಗಿದ್ದಾರೆ. ಮುಖ್ಯಮಂತ್ರಿಗಳು ತಕ್ಷಣ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಹಗರಣಗಳೆಲ್ಲವನ್ನೂ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ಸಿಎಂ ಅಧಿಕಾರದಿಂದ ಕೆಳಕ್ಕಿಳಿಯುವ ತನಕ ಈ ಹೋರಾಟ ಮುಂದುವರೆಯಲಿದೆ. ಸಿದ್ದರಾಮಯ್ಯನವರು ಕುರ್ಚಿಗೆ ಅಂಟಿಕೊಳ್ಳಬಾರದು. ವಿಧಾನಸಭೆಯಲ್ಲೇ ರಾಜೀನಾಮೆ ಪ್ರಕಟಿಸಬೇಕು ಎಂದು ತಿಳಿಸಿದರು. ಈ ಹೋರಾಟಕ್ಕೆ ಜಯ ಸಿಗಲಿ ಎಂದು ಆಶಿಸಿದರು.
 
ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಅನೇಕ ಜನಪರ ಕಾರ್ಯಕ್ರಮಗಳನ್ನು ನಮ್ಮ ಬಿಜೆಪಿ ಸರಕಾರ ಕೊಟ್ಟಿತ್ತು. ಮೋಸದ-ಆಕರ್ಷಣೆಯ ಗ್ಯಾರಂಟಿಗಳನ್ನು ಮುಂದಿಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ಇವತ್ತು ದಲಿತರ ಹಣವನ್ನು ದುರುಪಯೋಗ ಮಾಡಿಕೊಂಡಿದೆ. 56 ಸಾವಿರ ಕೋಟಿಯನ್ನು ಬಜೆಟ್‍ನಲ್ಲಿ ಗ್ಯಾರಂಟಿಗಾಗಿ ಇಟ್ಟಿದ್ದಾಗಿ ಹೇಳಿದ ಕಾಂಗ್ರೆಸ್ಸಿಗರು ದಲಿತರ ಹಣವನ್ನು ದಲಿತರಿಗೇ ನೀಡಿಲ್ಲ. 25 ಸಾವಿರಕ್ಕೂ ಹೆಚ್ಚು ಕೋಟಿ ದಲಿತರ ಹಣವನ್ನು ಲೂಟಿ ಮಾಡಿದ್ದೀರಲ್ಲಾ? ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದರು.

ಇದು ಲೂಟಿಕೋರರ ಸರಕಾರ. ಇದರ ವಿರುದ್ಧ ರಾಷ್ಟ್ರೀಯ ಎಸ್‍ಟಿ ಕಮಿಷನ್ ಕೂಡ ನೋಟಿಸ್ ಕೊಟ್ಟಿದೆ. ಸಿದ್ದರಾಮಯ್ಯ ತಂತ್ರಗಾರಿಕೆ ಚೆನ್ನಾಗಿ ಮಾಡುತ್ತಾರೆ. ದಲಿತ ಸಮುದಾಯಕ್ಕೆ ಖುಷಿ ಆಗುವಂತೆ ನಟನೆ ಮಾಡುತ್ತಾರೆ ಎಂದು ಟೀಕಿಸಿದರು. ದಲಿತರ ಹಣವನ್ನು ನೇರವಾಗಿ ಕಸಿಯುವ ತಾಕತ್ತಿದ್ದರೆ ಅದು ಕಾಂಗ್ರೆಸ್ಸಿಗರಿಗೆ ಮಾತ್ರ. ಅಂಥ ತಾಕತ್ತು ಬಿಜೆಪಿಯವರಿಗೆ ಇಲ್ಲ ಎಂದು ವ್ಯಂಗ್ಯವಾಗಿ ನುಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೇರವಾಗಿ ಸಿಕ್ಕಿಬಿದ್ದಿದ್ದಾರೆ. ದಲಿತರ ಹಣದಿಂದ ರಾಜೀನಾಮೆ ಕೊಟ್ಟ ಸಚಿವರ ಕಲ್ಯಾಣಕ್ಕೆ ಹಣ ಖರ್ಚಾಗಿದೆ. ದಲಿತರೂ ದೊಡ್ಡ ಹೋರಾಟಕ್ಕೆ ಇಳಿಯಲಿದ್ದಾರೆ ಎಂದು ಪ್ರಕಟಿಸಿದರು. ಸರಕಾರದ ದಿನಗಣನೆ ಆರಂಭವಾಗಿದೆ. ಸಿದ್ದರಾಮಯ್ಯ ಯಾವತ್ತು ರಾಜೀನಾಮೆ ಕೊಡುತ್ತಾರೆ ಎಂಬುದು ಶೀಘ್ರವೇ ಗೊತ್ತಾಗಲಿದೆ ಎಂದರು.

ಮಾಜಿ ಶಾಸಕ ರಾಜುಗೌಡ ಅವರು ಮಾತನಾಡಿ, ತೆಲಂಗಾಣ ಮೊದಲಾದ ಕಡೆಗಳಲ್ಲಿ ವಾಲ್ಮೀಕಿ ನಿಗಮದ ಹಣವನ್ನು ಖರ್ಚು ಮಾಡಿದ್ದಾರೆ. 187 ಕೋಟಿ ದುರುಪಯೋಗ ಆಗಿದೆ ಎಂದು ಟೀಕಿಸಿದರು. ವಿಧಾನಸೌಧಕ್ಕೆ ಮುತ್ತಿಗೆ ಸೇರಿದಂತೆ ಹೋರಾಟ ತೀವ್ರಗೊಳಿಸಲು ಮನವಿ ಮಾಡಿದರು.

ಶಾಸಕ ಚಂದ್ರು ಲಮಾಣಿ ಅವರು ಮಾತನಾಡಿ, ಪರಿಶಿಷ್ಟ ಪಂಗಡ, ಜಾತಿಗಳಿಗೆ ಸರಕಾರ ಅನ್ಯಾಯ ಮಾಡಿದೆ. ಈ ಸರಕಾರ ರಾಜೀನಾಮೆ ಕೊಡುವವರೆಗೆ ಹೋರಾಟ ಮಾಡೋಣ; ಜಿಲ್ಲೆ,
ತಾಲ್ಲೂಕುಗಳಲ್ಲೂ ಇದೇ ಮಾದರಿಯ ಹೋರಾಟ ನಿರಂತರವಾಗಿರಲಿ ಎಂದು ಮನವಿ ಮಾಡಿದರು.
ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರ ನೇತೃತ್ವದಲ್ಲಿ ಘೋಷಣೆ ಕೂಗಲಾಯಿತು. 25 ಸಾವಿರ ಕೋಟಿ ಲೂಟಿ ಹಣ ವಾಪಸ್ ಕೊಡಿ, ವಿಧಾನಸೌಧದ ಗದ್ದುಗೆದಾರರೇ ಕಿವಿಯ ಕೊಡಿ, ಕಣ್ಣು ಬಿಡಿ ಎಂಬಿತ್ಯಾದಿ ಘೋಷಣೆ ಕೂಗಿದರು.
 
ನೂಕಾಟ, ತಳ್ಳಾಟದ ಬಳಿಕ ಬಂಧನ
ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರಮುಖರು ಮತ್ತು ಕಾರ್ಯಕರ್ತರು ಮುನ್ನುಗ್ಗಿದಾಗ ಪೊಲೀಸರು ತಡೆಬೇಲಿ ಹಾಕಿ ತಡೆಯಲು ಮುಂದಾದರು. ಈ ಸಂದರ್ಭದಲ್ಲಿ ನೂಕಾಟ, ತಳ್ಳಾಟ ನಡೆಯಿತು. ಬಳಿಕ ಎಲ್ಲರನ್ನೂ ಬಂಧಿಸಲಾಯಿತು.
 
ಕಾರ್ಯಕರ್ತರು ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಕೂಗಿದರು. ಅಯ್ಯಯ್ಯೋ ಅನ್ಯಾಯ, ಡೌನ್ ಡೌನ್ ಎಂದು ಕಾರ್ಯಕರ್ತರ ಕೂಗು ಕೇಳಿಸಿತು. ಕೆಲವು ಕಾರ್ಯಕರ್ತರು ತಮ್ಮನ್ನು ಕರೆದೊಯ್ಯಲು ಸಿದ್ಧವಾಗಿದ್ದ ಬಸ್ಸಿನ ಮೇಲೇರಿ ಧಿಕ್ಕಾರ ಕೂಗಿದರು.
 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments