ನ್ಯೂಯಾರ್ಕ್: ವಿಶ್ವದ ದೊಡ್ಡಣ್ಣ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಗೆ ಈಗ ಮಹಾಮಾರಿ ಕೊರೋನಾ ಕಾಯಿಲೆ ವಕ್ಕರಿಸಿಕೊಂಡಿದೆ ಎಂದು ವರದಿಯಾಗಿದೆ. ಶ್ವೇತಭವನದ ಮೂಲಗಳು ಈ ವಿಚಾರವನ್ನು ಖಚಿತಪಡಿಸಿವೆ.
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್ ಪಿಯರ್ ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಕೊರೋನಾದ ಸೌಮ್ಯ ಲಕ್ಷಣಗಳಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಬೈಡನ್ ಈಗ ಪ್ರತ್ಯೇಕವಾಗಿದ್ದಾರೆ ಎಂದು ತಿಳಿದುಬಂದಿದೆ. ಅಮೆರಿಕಾ ಅಧ್ಯಕ್ಷರಾಗಿರುವ ಜೋ ಬೈಡನ್ ಗೆ ಈಗ 81 ವರ್ಷ.
ಇತ್ತೀಚೆಗೆ ಅವರಿಗೆ ಪದೇ ಪದೇ ಕೆಮ್ಮು ಕಾಣಿಸಿಕೊಳ್ಳುತ್ತಿತ್ತು. ಮೊನ್ನೆಯಷ್ಟೇ ಅವರು ಲಾಸ್ ವೇಗಾಸ್ ನಲ್ಲಿ ರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಪ್ರಚಾರ ನಿಮಿತ್ತ ಅವರು ಇತ್ತೀಚೆಗೆ ನಿರಂತರವಾಗಿ ಓಡಾಡುತ್ತಿದ್ದಾರೆ.
ವಿಶೇಷವೆಂದರೆ ಬೂಸ್ಟರ್ ಡೋಸ್ ಸೇರಿದಂತೆ ಕೊರೋನಾ ವಿರುದ್ಧ ಬೈಡನ್ ಎಲ್ಲಾ ಲಸಿಕೆ ಹಾಕಿಸಿಕೊಂಡಿದ್ದರು. ಆದರೂ ಅವರಿಗೆ ಸೋಂಕು ತಗುಲಿದೆ. ಈ ಹಿಂದೆ 2022 ರಲ್ಲಿ ಬೈಡನ್ ಗೆ ಮೊದಲ ಬಾರಿಗೆ ಕೊವಿಡ್ ಕಾಣಿಸಿಕೊಂಡಿತ್ತು. ಇತ್ತೀಚೆಗಿನ ದಿನಗಳಲ್ಲಿ ಅಮೆಎರಿಕಾದಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಸ್ವತಃ ಅಧ್ಯಕ್ಷರಿಗೇ ಸೋಂಕು ತಗುಲಿರುವ ವರದಿಯಾಗಿದೆ.