ಬೆಳಗಾವಿ: ಬೆಳಗಾವಿಯಲ್ಲಿರುವ ಸೇನಾಧಿಕಾರಿ ಸೋಫಿಯಾ ಖುರೇಷಿ ಅವರ ಅತ್ತೆ ಮಾವನ ಮನೆ ಮೇಲೆ ದಾಳಿ ನಡೆದಿದೆ ಎಂದು ಹರಿದಾಡುತ್ತಿರುವ ನಕಲಿ ಪೋಸ್ಟ್ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಯ ದೂರಿನ ಮೇರೆಗೆ, 'X' ಖಾತೆದಾರ ಅನಿಸ್ ಉದ್ದೀನ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 353(2) (ಸಾರ್ವಜನಿಕ ಕಿರುಕುಳಕ್ಕೆ ಕಾರಣವಾಗುವ ಹೇಳಿಕೆಗಳು ಮತ್ತು 192 (A) (ಗಲಭೆಯನ್ನು ಉಂಟುಮಾಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಪ್ರಚೋದನೆ ನೀಡುವುದು) ಅಡಿಯಲ್ಲಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇನ್ನೂ ಅದೇ ಪೋಸ್ಟ್ ಅನ್ನು ಮರು ಟ್ವೀಟ್ ಮಾಡಿದಕ್ಕಾಗಿ ಮತ್ತಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಖಾತೆದಾರರಾದ ಖುಬಾನಿ ಮತ್ತು ಡ್ರುಮಿ ಅವರ ಹೆಸರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಈ ಖಾತೆದಾರರ ಗುರುತನ್ನು ಇನ್ನೂ ಪರಿಶೀಲಿಸಬೇಕಾಗಿದೆ.
ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಶಂಕರ್ ಗುಳೇದ್ ಬುಧವಾರ " ಖುರೇಷಿ ಅವರ ಪತಿಯ ಮನೆ ಮೇಲೆ ಅಂತಹ ಯಾವುದೇ ಘಟನೆ ನಡೆದಿಲ್ಲ" ಎಂದು ದೃಢಪಡಿಸಿದರು, ಈ ಪೋಸ್ಟ್ ಸುಳ್ಳು ಎಂದು ಸ್ಪಷ್ಟಪಡಿಸಿದರು.