Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನಗುವಿನ ಮಾಲೀಕ, ಕನ್ನಡಿಗರ ಮನೆ-ಮನಗಳ ಅಜಾತಶುತ್ರು ಅಪ್ಪು ನಮ್ಮನ್ನ ಅಗಲಿ ತಿಂಗಳುಗಳೇ ಕಳೆದಿದೆ. ಆದರೆ, ಅಪ್ಪು ಮಾತ್ರ ಅಭಿಮಾನಿಗಳ ಮನದಲ್ಲಿ ಚಿರಸ್ಥಾಯಿಯಾಗಿ ನೆಲೆ ನಿಂತಿದ್ದಾರೆ. ಇದಕ್ಕೆ ಚಿಕ್ಕಮಗಳೂರು ನಗರದಲ್ಲಿ ನಡೆದ ಮದುವೆಯೇ ಜೀವಂತ ಸಾಕ್ಷಿ. ಅಗಲಿದ ನಟನನ್ನ ಹುಟ್ಟುಹಬ್ಬದಂದೋ ಅಥವ ಪುಣ್ಯ ಸ್ಮರಣೆಯ ದಿನವೋ ನೆನೆಪು ಮಾಡಿಕೊಳ್ಳುವುದು ಸಾಮಾನ್ಯ. ಆದರೆ, ಚಿಕ್ಕಮಗಳೂರಿನ ಅಪ್ಪು ಅಭಿಮಾನಿಯೋರ್ವ ತನ್ನ ಮದುವೆಯ ದಿನ ಮಾಂಗಲ್ಯಧಾರಣೆಗೂ ಮುನ್ನ ಅಪ್ಪುವಿನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ನಮಸ್ಕರಿಸಿ ಬಳಿಕ ಮಾಂಗಲ್ಯಧಾರಣೆ ಮಾಡಿದ್ದಾರೆ. ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ್ ನಿಲಯ್ ಹಾಗೂ ಸುಪ್ರೀಯಾ ಎಂಬುವರ ಮದುವೆ ಸಂದರ್ಭದಲ್ಲಿ ಅಪ್ಪುವನ್ನ ನೆನೆದು ಕಣ್ಣೀರಿಟ್ಟಿದ್ದಾರೆ. ಮದುವೆ ಮನೆಯಲ್ಲೂ ಅಪ್ಪುವಿನ ಭಾವಚಿತ್ರ ಹಾಕಲಾಗಿತ್ತು. ವೇದಿಕೆ ಮುಂಭಾಗದಲ್ಲಿ ಅಪ್ಪು ಭಾವಚಿತ್ರಕ್ಕೆ ನವದಂಪತಿಗಳು ಹೂವಿನ ಮಾಲೆ ಹಾಕಿ ಪೂಜೆ ಸಲ್ಲಿಸಿ ನಂತರ ಮಾಂಗಲ್ಯ ಧಾರಣೆ ಮಾಡಿದ್ದಾರೆ. ಮದುವೆ ಮಂಟಪದ ಎಲ್ಇಡಿ ವಾಲ್ನಲ್ಲೂ ಸಹ ಅಪ್ಪು ಅಜಾತಶತ್ರುವಾಗಿದ್ದರು. ನವದಂಪತಿಗಳಿಬ್ಬರು ಅಪ್ಪುವಿನ ಅಭಿಮಾನಿಗಳಾಗಿದ್ದರು. ವಿವಾಹದ ಲಗ್ನಪತ್ರಿಕೆಯಲ್ಲೂ ಕೂಡ ತಮ್ಮ ಹೆಸರಿನ ಮುಂದೆ ಅಪ್ಪು ಎಂದು ನಮೂದಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ.