ಬೆಂಗಳೂರು:-ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಾಲ್ಕುನೂರು ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗೆ ಅನುಮೋದನೆ ದೊರಕಿದೆ ಎಂದು ಸಂಗೋಪನೆ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.
ಹಲವಾರು ವರ್ಷಗಳಿಂದ ಪಶುಸಂಗೋಪನೆ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಗಳು ಸೇರಿದಂತೆ ಸಾವಿರಾರು ಹುದ್ದೆಗಳು ಖಾಲಿಯಿದ್ದು ಯಾವ ಸಚಿವರು ನೇಮಕಾತಿಗೆ ಆಸಕ್ತಿ ತೋರಿರಲಿಲ್ಲ ಎಂದು ಅವರು ಹೇಳಿದ್ದಾರೆ. ಇಲಾಖೆಯ ಅಧಿಕಾರವಹಿಸಿಕೊಂಡ ದಿನದಿಂದ ಇಲಾಖೆಯ ಹುದ್ದೆಗಳ ಭರ್ತಿಗೆ ಹೆಚ್ಚಿನ ಒತ್ತು ನೀಡಿ ನಿರಂತರ ಮುಖ್ಯಮಂತ್ರಿಗಳೊಂದಿಗೆ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಖಾಲಿ ಹುದ್ದೆ ಭರ್ತಿಗೆ ಕ್ರಮ ವಹಿಸಿದ್ದೆ ಎಂದು ತಿಳಿಸಿದ್ದಾರೆ.
ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆ ವಿಳಂಭವಾದ್ದರಿಂದ ಕಳೆದ ಹಲವು ವರ್ಷಗಳಿಂದ ಹುದ್ದೆಗಳು ಖಾಲಿ ಇದ್ದು ಸಮರ್ಪಕವಾಗಿ ರೋಗ ನಿಯಂತ್ರಣ, ಪಶು ಆರೋಗ್ಯ ಸೇವೆ, ಕೃತಕ ಗರ್ಭಧಾರಣೆ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ತೊಂದರೆಯಾಗುತ್ತಿತ್ತು.
ಗೋಹತ್ಯೆ ನಿಷೇಧ, ಜಿಲ್ಲೆಗೊಂದು ಗೋಶಾಲೆ ಸ್ಥಾಪನೆ ಮತ್ತು ನಿರ್ವಹಣೆ, ಪ್ರಾಣಿ ಕಲ್ಯಾಣ ಸಹಾಯವಾಣಿ, ಪಶು ಸಂಜೀವಿನಿ ಅಂಬ್ಯುಲೆನ್ಸ್ ಮತ್ತು ಪಾಲಿ ಕ್ಲಿನಿಕ್ ಸೇವೆಗಳಿಗೆ ಹಿನ್ನಡೆಯಾಗುತ್ತಿತ್ತು. ಪ್ರತೀ ಬಾರಿ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಇಲಾಖಾ ಅಧಿಕಾರಿಗಳು ಸಿಬ್ಬಂದಿ ಕೊರತೆ ನೀಗಿಸಲು ಮನವಿ ಮಾಡಿಕೊಳ್ಳುತ್ತಿದ್ದರು.
ಹೊಸ ನೇಮಕಾತಿಯಿಂದ ಪಶುಪಾಲಕರಿಗೆ ರೈತರಿಗೆ ಉತ್ತಮ ಸೇವೆ ನೀಡಲು ಸಹಕಾರಿಯಾಗಲಿದೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಟ್ಟು ಖಾಲಿ ಇರುವ 900ಕ್ಕೂ ಹೆಚ್ಚು ಹುದ್ದೆಗಳ ಪೈಕಿ 400 ಹುದ್ದೆಗಳ ಭರ್ತಿಗೆ ಅನುಮೋದನೆ ದೊರೆತಿದ್ದು, ಆರ್ಥಿಕ ಇಲಾಖೆಯ ಮೂಲಕ ಪ್ರಸ್ತಾವನೆಗೆ ಸಹಮತಿ ಪಡೆಯಲಾಗಿತ್ತು. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹುದ್ದೆಗಳ ಭರ್ತಿಗೆ ಅನುಮೋದನೆ ದೊರೆತಿದ್ದು ತಕ್ಷಣ ಅಧಿಸೂಚನೆ ಹೊರಡಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ, ಸಂಪುಟ ಸಹೋದ್ಯೋಗಿ ಸಚಿವರುಗಳಿಗೆ ಮತ್ತು ಇಲಾಖಾ ಹಿರಿಯ ಅಧಿಕಾರಿಗಳಿಗೆ ಪಶುಸಂಗೋಪನಾ ಸಚಿವರಾದ ಪ್ರಭು ಚವ್ಹಾಣ್ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ.