ಬೆಂಗಳೂರು: ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ಸಬಲೀಕರಣ ಮಾಡುತ್ತಲೇ ಗುಣಮಟ್ಟದ ಶಿಕ್ಷಣಕ್ಕೂ ಸರಕಾರ ಗಣನೀಯ ಪ್ರೋತ್ಸಾಹ ನೀಡುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನಲ್ಲಿಂದು ರಾಜ್ಯಪಾಲರಾದ ಥಾವರಚಂದ್ ಗೆಹಲೋತ್ ಅವರು ಅವರು ʼವಿದ್ಯಾಶಿಲ್ಪʼ ವಿಶ್ವವಿದ್ಯಾಲಯವನ್ನು ಲೋಕಾರ್ಪಣೆ ಮಾಡಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಸರಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಎಲ್ಲೇ ಆಗಲಿ, ಗುಣಮಟ್ಟದ ಶಿಕ್ಷಣಕ್ಕೆ ಸರಕಾರ ಆದ್ಯತೆ ನೀಡಲಿದೆ ಎಂದರು.
ಇಡೀ ದೇಶದಲ್ಲೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವೃತ್ತಿಪರ ಶಿಕ್ಷಣ ಬೋಧನೆ ಮಾಡಲು ಅವಕಾಶ ಮಾಡಿಕೊಟ್ಟ ದೇಶದ ಮೊತ್ತ ಮೊದಲ ರಾಜ್ಯ ಕರ್ನಾಟಕ. ಸರಕಾರಿ ಸಂಸ್ಥೆಗಳ ಜತೆ ಜತೆಯಲ್ಲೇ ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡ ಗುಣಮಟ್ಟದ ಶಿಕ್ಷಣಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿವೆ ಎಂದು ಸಚಿವರು ಪ್ರತಿಪಾದಿಸಿದರು.
ಗುಣಮಟ್ಟದ ಶಿಕ್ಷಣಕ್ಕೆ ಕರ್ನಾಟಕ ಅನ್ವರ್ಥ. ದೇಶದಲ್ಲೇ ಮುಂಚೂಣಿಯಲ್ಲಿರುವ ನಮ್ಮ ರಾಜ್ಯದ ಸಶಕ್ತ ಶೈಕ್ಷಣಿಕ ವ್ಯವಸ್ಥೆಗೆ ಹೊಸ ಸೇರ್ಪಡೆ ವಿದ್ಯಾಶಿಲ್ಪ ವಿವಿ. ಇಡೀ ಬೆಂಗಳೂರು ನಗರವನ್ನೇ ಒಂದು ಕ್ಲಾಸ್ ರೂಂ ನಂತೆ ಸಂಸ್ಥೆ ನೋಡುತ್ತಿದೆ. ಇದು ಅತ್ಯಂತ ಉತ್ತಮ ಪರಿಕಲ್ಪನೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂಥ ದೂರದೃಷ್ಟಿ ಯೋಚನೆಗಳಿಂದ ವಿದ್ಯಾಶಿಲ್ಪ ವಿವಿ ಚೆನ್ನಾಗಿ ಬೆಳೆಯತ್ತದೆ ಎನ್ನುವ ವಿಶ್ವಾಸ ನನಗಿದೆ. ಇಂಥ ಪ್ರಯತ್ನಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ-2020 ಕೂಡ ಪೂರಕವಾಗಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.
ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ವಿವಿಯ ನೂತನ ಲೋಗೋ ಬಿಡುಗಡೆ ಮಾಡಿ ಮಾತನಾಡಿದರು.
ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ, ವಿದ್ಯಾಶಿಲ್ಪ ವಿವಿ ಕುಲಪತಿ ಡಾ.ಪಿ.ದಯಾನಂದ ಪೈ, ಸಹ ಕುಲಪತಿ ಡಾ.ಕಿರಣ್ ಪೈ ಹಾಗೂ ಉಪ ಕುಲಪತಿ ಪ್ರೊ.ವಿಜಯನ್ ಇಮ್ಯಾನುಯಲ್ ಮುಂತಾದವರು ಹಾಜರಿದ್ದು ಮಾತನಾಡಿದರು.