Publish Date: Tue, 23 Apr 2024 (12:31 IST)
Updated Date: Tue, 23 Apr 2024 (12:33 IST)
ಹುಬ್ಬಳ್ಳಿ: ಇತ್ತೀಚೆಗಷ್ಟೇ ಅನ್ಯಕೋಮಿನ ಫಯಾಜ್ ಎಂಬಾತನಿಂದ ನೇಹಾ ಹತ್ಯೆಗೀಡಾದ ಪ್ರಕರಣ ರಾಜ್ಯಾದ್ಯಂತ ಸಾಕಷ್ಟು ಸುದ್ದಿ ಮಾಡಿತ್ತು. ಇದರ ಬೆನ್ನಲ್ಲೇ ಈಗ ಹುಬ್ಬಳ್ಳಿಯಲ್ಲೇ ಇಂತಹದ್ದೊಂದು ಪ್ರಕರಣ ನಡೆದಿದೆ.
ತನ್ನನ್ನು ಪ್ರೀತಿಸಲು ಒಪ್ಪದ ಹಿಂದೂ ಯುವತಿ ಮೇಲೆ ಮುಸ್ಲಿಂ ಸಮುದಾಯದ ಯುವಕನೊಬ್ಬ ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದ ಅಫ್ತಾಬ್ ಶಿರಹಟ್ಟಿ ಎಂಬಾತ ಹಲ್ಲೆ ನಡೆಸಿದ್ದಾನೆ. ಈತನನ್ನು ಸ್ಥಳೀಯರೇ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ.
ಪೊಲೀಸರು ಆತನನ್ನು ಕೋರ್ಟ್ ಗೆ ಹಾಜರುಪಡಿಸಿದ್ದು, 1 ವಾರ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತನಗೆ ಕಿರುಕುಳ ನೀಡಿದ ಬಗ್ಗೆ ಯುವತಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಳು. ಯುವತಿ ಹೇಳಿದ ಪ್ರಕಾರ ಎರಡು ವರ್ಷದಿಂದ ಅಫ್ತಾಬ್ ನನ್ನು ಪರಿಚಯವಿತ್ತು. ಇತ್ತೀಚೆಗೆ ಪ್ರೀತಿಸು ಎಂದು ಹಿಂದೆ ಬಿದ್ದಿದ್ದ. ಮುಸ್ಲಿಂ ಗೆಳೆತಿಯೊಬ್ಬಳು ಆತನನ್ನು ಪರಿಚಯ ಮಾಡಿಕೊಟ್ಟಿದ್ದಳು.
ಹುಟ್ಟಹಬ್ಬದಂದು ಬಲವಂತವಾಗಿ ಗಿಫ್ಟ್ ಕೊಟ್ಟಿದ್ದ. ನೇಹಾ ಘಟನೆ ಬಳಿಕ ಭಯವಾಗಿತ್ತು. ಹೀಗಾಗಿ ಆತ ನೀಡಿದ ಗಿಫ್ಟ್ ನ್ನು ಮರಳಿಸಲು ಅಂಗಡಿಗೆ ಹೋಗಿದ್ದೆ. ನನ್ನ ಗಿಫ್ಟ್ ಸುಟ್ಟು ಹಾಕಿ ನನ್ನ ಮೇಲೆ ಹಲ್ಲೆ ಮಾಡಿದ್ದ. ಸ್ಥಳೀಯರೇ ಆತನನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದರು ಎಂದು ಯುವತಿ ಹೇಳಿಕೆ ನೀಡಿದ್ದಾಳೆ.