ತಡ ರಾತ್ರಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಅಧಿಕಾರಿಯು, ಕಾರೊಂದನ್ನು ತಡೆದು ತಪಾಸಣೆ ಮಾಡುತ್ತಿದ್ದಾಗ ಚಾಲಕ ರಭಸವಾಗಿ ಚಲಿಸಿದ್ದರಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬಂಧನ ಮಾಡಲಾಗಿದೆ.
ತುಮಕೂರಿನ ಜಯನಗರ ಪಿಎಸ್ಐ ನವೀನ್ಕುಮಾರ್ ಅವರು, ಅನುಮಾನಸ್ಪದವಾಗಿ ಓಡಾಡುತ್ತಿದ್ದ ಕಾರನ್ನು ಗಮನಿಸಿದ್ದರು. ಆ ಕಾರನ್ನು ತಡೆದು ವಿಚಾರಣೆ ನಡೆಸಲು ಮುಂದಾಗಿದ್ದ ಸಂದರ್ಭದಲ್ಲಿ ಸಬ್ಇನ್ಸ್ಪೆಕ್ಟರ್ರವರನ್ನು ಲೆಕ್ಕಿಸದೆ ಕಾರು ಚಾಲನೆ ಮಾಡಿಕೊಂಡು ಹೋಗಿದ್ದರು ಆರು ಜನ ದುಷ್ಕರ್ಮಿಗಳು. ಆರು ಜನ ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ.ವಂಶಿಕೃಷ್ಣ ಹೇಳಿದ್ದಾರೆ.
ತುಮಕೂರು ನಗರದ ಉಪ್ಪಾರಹಳ್ಳಿ ಅಂಡರ್ ಪಾಸ್ ಬಳಿ ಪೊಲೀಸ್ ರು ಗಸ್ತಿನಲ್ಲಿದ್ದ ಸಂದರ್ಭದಲ್ಲಿ ಕಾರಿನಲ್ಲಿ ದೊಣ್ಣೆ ಮತ್ತಿತರ ಮಾರಕಾಸ್ತ್ರಗಳು ಕಂಡು ಬಂದಿವೆ. ತಕ್ಷಣ ಎಚ್ಚೆತ್ತ ನವೀನ್ ಅವರ ಕಾರಿನ ಸ್ಟೇರಿಂಗ್ ಹಿಡಿದು ವಿಚಾರಣೆ ಚುರುಕುಗೊಳಿಸಿದ್ದಾರೆ. ಆದರೆ ಕಾರಿನ ಚಾಲಕ ರಭಸವಾಗಿ ಚಲಿಸಿದ ಪರಿಣಾಮ ಪಿಎಸ್ಐ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ.
ಈ ಸುದ್ದಿ ತಿಳಿದ ಕೂಡಲೇ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರ ತಂಡ ಆರು ಮಂದಿ ದುಷ್ಕರ್ಮಿಗಳ ಪೈಕಿ ಕಾರಿನಲ್ಲಿದ್ದ ವಿತ್ತೇಶ್ (28) ಎಂಬಾತನನ್ನು ಬಂಧಿಸಿದ್ದಾರೆ. ಉಳಿದ ಐದು ಮಂದಿ ಪರಾರಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.